ಇವಿಎಂ ಇಟ್ಟ ಸ್ಟ್ರಾಂಗ್ ರೂಮ್ ಒಳಗೆ ಲ್ಯಾಪ್ ಟಾಪ್ ಜೊತೆ ಸಿಕ್ಕಿ ಬಿದ್ದ ಇಬ್ಬರು

Update: 2018-12-07 12:03 GMT

ಜಗದಾಲಪುರ ( ಛತ್ತೀಸ್ ಗಢ ), ಡಿ. 7 : ಇಲೆಕ್ಟ್ರಾನಿಕ್ ಮತಯಂತ್ರಗಳನ್ನು ಇಟ್ಟ ಸ್ಟ್ರಾಂಗ್ ರೂಮ್ ಒಳಗೆ ಲ್ಯಾಪ್ ಟಾಪ್ ಜೊತೆ ಅನುಮಾನಾಸ್ಪದವಾಗಿ ಕಂಡುಬಂದ ಇಬ್ಬರನ್ನು ಇಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಇಬ್ಬರು ಸ್ಟ್ರಾಂಗ್ ರೂಮ್ ಒಳಗೆ ಭದ್ರತೆ ಭೇದಿಸಿ ಹೇಗೆ ಹೋದರು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಇಬ್ಬರು ಬ್ಯಾಗ್ ಒಂದರ ಜೊತೆ ಸ್ಟ್ರಾಂಗ್ ರೂಮ್ ಪ್ರವೇಶಿಸಿದ್ದಾರೆ ಎಂದು ದೂರಿದ ಬಳಿಕ ಇಬ್ಬರನ್ನು ವಶಕ್ಕೆ ಪಡೆಯಲಾಯಿತು. 

" ಸೂಕ್ತ ಗುರುತಿನ ಚೀಟಿ ಇಲ್ಲದೆ ಒಳಗೆ ಹೋಗುವಂತಿಲ್ಲ . ಇವರಿಬ್ಬರು ಹೇಗೆ ಹೋದರು ಎಂದು ಗೊತ್ತಾಗುತ್ತಿಲ್ಲ. ಇಬ್ಬರು ತಾವು ರಿಲಯನ್ಸ್ ಜಿಯೋ ಕಂಪೆನಿಯ ಉದ್ಯೋಗಿಗಳು ಎಂದುಹೇಳುತ್ತಿದ್ದಾರೆ . ಈ ಬಗ್ಗೆ ತನಿಖೆ ನಡೆಯುತ್ತಿದೆ " ಎಂದು ಪೊಲೀಸರು ಹೇಳಿದ್ದಾಗಿ ಸುದ್ದಿ ಸಂಸ್ಥೆ ಎ ಎನ್ ಐ ಟ್ವೀಟ್ ಮಾಡಿದೆ. ಸ್ಟ್ರಾಂಗ್ ರೂಮ್ ಭದ್ರತೆಗಾಗಿ ನಿಯೋಜಿತ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. 

ವಿಶೇಷವೆಂದರೆ , ಕೇವಲ ಒಂದು ದಿನ ಮೊದಲು ಇಲ್ಲಿನ ಬೆಮೇತರ ಜಿಲ್ಲೆಯಲ್ಲಿ ಸ್ಟ್ರಾಂಗ್ ರೂಮ್ ಹೊರಗೆ ಲ್ಯಾಪ್ ಟಾಪ್ ಜೊತೆ ಅನುಮಾನಾಸ್ಪದವಾಗಿ ಕಂಡು ಬಂದಿದ್ದ ಬಿ ಎಸ್ ಎಫ್ ಸಬ್ ಇನ್ಸ್ ಪೆಕ್ಟರ್ ಒಬ್ಬನನ್ನು ಕರ್ತವ್ಯದಿಂದ ಹಿಂದೆಗೆದುಕೊಳ್ಳಲಾಗಿತ್ತು. 

12 ಮತ್ತು 20 ನವೆಂಬರ್ ಗಳಂದು ಎರಡು ಹಂತಗಳಲ್ಲಿ ರಾಜ್ಯದಲ್ಲಿ ಮತದಾನ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News