ಉತ್ತರ ಕರ್ನಾಟಕದ ಬಗ್ಗೆ ಸಿಎಂ ಮಲತಾಯಿ ಧೋರಣೆ: ಬಿಎಸ್‌ವೈ

Update: 2018-12-07 13:34 GMT

ಬೆಂಗಳೂರು, ಡಿ.7: ಉತ್ತರ ಕರ್ನಾಟಕದ ಬಹಳಷ್ಟು ತಾಲೂಕುಗಳು ಬರದಿಂದ ತತ್ತರಿಸಿವೆ. ಜನರಿಗೆ ಕುಡಿಯಲು ನೀರು ಇಲ್ಲ. ಮುಖ್ಯಮಂತ್ರಿಯಾಗಲಿ, ಅವರ ಮಂತ್ರಿಗಳಾಗಲಿ, ಬರಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಿಲ್ಲ. ಜನರ ಸಂಕಷ್ಟಗಳನ್ನು ಅರಿಯಲು ಪ್ರಯತ್ನಿಸುತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಭತ್ತ ನಾಟಿ ಮಾಡಿದಾಗ ರೈತರು ಮತ್ತು ಜನರು ಸಂಭ್ರಮಿಸಿದ್ದರು. ರೈತ ಮುಖ್ಯಮಂತ್ರಿ ಎಂದು ಕೊಂಡಾಡಿದ್ದರು. ಇಂದು ಅವರು ನಾಟಿ ಮಾಡಿದ ಭತ್ತದ ಕೊಯಿಲನ್ನು ಮಾಡಲು ಹೊರಟಿದ್ದಾರೆ ಎಂದರು.

ಕುಮಾರಸ್ವಾಮಿ ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಭತ್ತ ನಾಟಿ ಮಾಡಿ ಅದರ ಕೊಯಿಲಿಗೆ ಕುಮಾರಸ್ವಾಮಿ ಹೋಗಿರುವುದು ನೋಡಿದರೆ ಉತ್ತರ ಕರ್ನಾಟಕದ ಬಗ್ಗೆ ಅವರಿಗೆ ಇರುವ ಮಲತಾಯಿ ಧೋರಣೆ ಬಗ್ಗೆ ಅಸಹನೆ ಹುಟ್ಟಿಸುತ್ತದೆ ಎಂದು ಯಡಿಯೂರಪ್ಪ ದೂರಿದರು.

ಒಬ್ಬ ವ್ಯಕ್ತಿ ಒಂದು ಸಲ ತಮ್ಮ ನಿಲುವನ್ನು ಮತ್ತು ಮನಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದಾದ ಮೇಲೆ ನಿಮ್ಮ ಉತ್ತರ ಕರ್ನಾಟಕದ ವಿರೋಧಿ ನಿಲುವು ಬಗ್ಗೆ ಚರ್ಚಿಸುವುದು ವ್ಯರ್ಥದ ಮಾತು ಅನ್ನಿಸುತ್ತದೆ. ಒಬ್ಬ ರಾಜ್ಯದ ಮುಖ್ಯಮಂತ್ರಿ ತಾಯಿಯ ಸ್ಥಾನದಲ್ಲಿ ಇರಬೇಕೆ ವಿನಃ ಮಲತಾಯಿ ಸ್ಥಾನದಲ್ಲಿ ಅಲ್ಲ ಎಂದು ಅವರು ಹೇಳಿದರು.

ರಾಜ್ಯ ರಾಜಕೀಯದಲ್ಲಿ ಇದು ವಾಡಿಕೆ ಆಗಿದೆ. ನಿಮ್ಮ ಅಥವಾ ನಿಮ್ಮ ಪಕ್ಷದವರ ಮೇಲೆ ಆಪಾದನೆ ಬಂದರೆ, ನನ್ನ ಕಡೆ ಬೊಟ್ಟು ಮಾಡಿ ತೋರಿಸುವುದು. 35 ಸಾವಿರ ಕೋಟಿ ರೂ.ಗಳಿಗೆ ಲೆಕ್ಕಪತ್ರವಿಲ್ಲ ಎಂದು ಸಿಎಜಿ ಎತ್ತಿ ತೋರಿಸಿದೆ. ‘ನಾವೇನು ಜೈಲಿಗೆ ಹೋಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಉತ್ತರ ಕೊಡುತ್ತಾರೆ’. ಕಾನೂನು ಓದಿದವರೇ ಈ ರೀತಿ ಅಸಂಬದ್ಧ ಹೇಳಿಕೆ ನೀಡಿದರೆ, ಇನ್ನು ಸಾಮಾನ್ಯ ಅಪರಾಧಿ ಏನು ಹೇಳುತ್ತಾನೆ? ಅವನು ಈ ನೆಲದ ಕಾನೂನಿಗೆ ಏಕೆ ಗೌರವ ಕೊಡುತ್ತಾನೆ ಎಂದು ಯಡಿಯೂರಪ್ಪ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News