ಮದ್ಯದ ಅಮಲಿನಲ್ಲಿ ವಿದೇಶಿ ಯುವತಿಯ ಗಲಾಟೆ: ದೂರು

Update: 2018-12-07 13:36 GMT

ಬೆಂಗಳೂರು, ಡಿ.7: ಕೀನ್ಯಾ ಮೂಲದ ಯುವತಿಯೊಬ್ಬಾಕೆ ಮದ್ಯದ ಅಮಲಿನಲ್ಲಿ ಗಲಾಟೆ ನಡೆಸಿದ ಆರೋಪದಡಿ ಇಲ್ಲಿನ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಾಶಾ ಎಂಬಾಕೆ ಮದ್ಯದ ಅಮಲಿನಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪ ಕೇಳಿಬಂದಿದೆ.

ಗುರುವಾರ ತಡರಾತ್ರಿ ಸಾಶಾ, ಬಾಣಸವಾಡಿಯ ಕಮ್ಮನಹಳ್ಳಿ ಸರ್ಕಲ್ ಬಳಿ ಮದ್ಯ ಕುಡಿದು ಗಲಾಟೆ ಮಾಡುತ್ತಿದ್ದಳು. ಈ ವೇಳೆ ಸ್ಥಳಕ್ಕೆ ಬಂದ ಹೊಯ್ಸಳ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾಳೆ ಎನ್ನಲಾಗಿದ್ದು, ಪೊಲೀಸರು ಸಾಶಾಳನ್ನು ಬಾಣಸವಾಡಿ ಪೊಲೀಸ್ ಠಾಣೆಗೆ ಕರೆ ತಂದಿದ್ದರು.

ಠಾಣೆಗೆ ಬಂದ ನಂತರ ಬಟ್ಟೆ ಹರಿದುಕೊಂಡು ರಂಪಾಟ ಮಾಡಿದ್ದಾಳೆ. ಸೆರೆ ಹಿಡಿಯಲು ಹೋದ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿರುವುದಾಗಿ ಹೇಳಲಾಗುತ್ತಿದೆ. ಈ ಸಂಬಂಧ ಆಕೆಯ ವಿರುದ್ಧ ಐಪಿಸಿ ಸೆಕ್ಷನ್ 323(ಸ್ವಇಚ್ಛೆಯಿಂದ ಹಾನಿ), 504(ಉದ್ದೇಶ ಪೂರ್ವಕ ನಿಂದನೆ) ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಪೇದೆಯಿಂದ ಹಲ್ಲೆ: ಆರೋಪ

ನಗರದ ಕಮ್ಮನಹಳ್ಳಿ ಪಬ್ ಸಮೀಪ ರಾತ್ರಿ ವೇಳೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು, ಮನೆಗೆ ಹೋಗುತ್ತಿದ್ದ ವೇಳೆ ಹಿರಿಯ ಪೇದೆಯೋರ್ವ ನನ್ನನ್ನು ಆಟೋದಿಂದ ಕೆಳಗಿಳಿಸಿ ಥಳಿಸಿದ್ದಾರೆ. ಅಲ್ಲದೆ, ಘಟನೆ ಕುರಿತು ದೂರು ನೀಡಲು ಠಾಣೆಗೆ ಹೋದಾಗ ಮತ್ತೆ ಪೊಲೀಸರು ತಮ್ಮ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಕೀನ್ಯಾ ದೇಶದ ಯುವತಿ ಸಾಶಾ, ಈ ಸಂಬಂಧ ತನಿಖೆ ನಡೆಸಿ ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News