ಕೃಷಿ ಉತ್ಪನ್ನಗಳ ಆನ್‌ಲೈನ್ ಮಾರಾಟಕ್ಕೆ ವಿರೋಧ: ಯಶವಂತಪುರ ಮಾರ್ಕೆಟ್ ಬಂದ್ ಕರೆಗೆ ವ್ಯಾಪಕ ಬೆಂಬಲ

Update: 2018-12-07 13:44 GMT

ಬೆಂಗಳೂರು, ಡಿ.7: ಕೃಷಿ ಉತ್ಪನ್ನಗಳ ಆನ್‌ಲೈನ್ ಮಾರಾಟಕ್ಕೆ ಪರವಾನಿಗೆ ನೀಡುತ್ತಿರುವ ಕ್ರಮ ಖಂಡಿಸಿ ಎಪಿಎಂಸಿ ವರ್ತಕರ ಒಕ್ಕೂಟವು ಶುಕ್ರವಾರ ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ವ್ಯಾಪಕ ಬೆಂಬಲ ದೊರೆತಿದೆ.

ಯಶವಂತಪುರ ಎಪಿಎಂಸಿ ವರ್ತಕರ ಒಕ್ಕೂಟ, ಲಾರಿ ಮಾಲಕರ ಸಂಘ, ಗ್ರೈನ್ ಮರ್ಚೆಂಟ್ ಅಸೋಸಿಯೇಷನ್ ಸೇರಿದಂತೆ ಹಲವು ಸಂಘಗಳ ಮುಖಂಡರು, ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ, ಆನ್‌ಲೈನ್ ಮಾರಾಟ ಕ್ರಮ ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಎಪಿಎಂಸಿಗೆ ಪ್ರತಿ ದಿನ ಟನ್‌ಗಟ್ಟಲೆ ತರಕಾರಿ, ದವಸ, ಧಾನ್ಯಗಳು ಬರುತ್ತವೆ. ನೂರು ಟನ್‌ನಿಂದ ಸಾವಿರ ಟನ್‌ಗಳ ವರೆಗೆ ವ್ಯಾಪಾರ ವಹಿವಾಟು ನಡೆಯುತ್ತದೆ. ಈ ವ್ಯಾಪಾರ ಅವಲಂಬಿಸಿ ಸಾವಿರಾರು ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಸರಕಾರ ಆನ್‌ಲೈನ್ ಸೇವೆಯನ್ನು ಜಾರಿಗೊಳಿಸಿ ನಮ್ಮ ಬದುಕನ್ನು ಬೀದಿಪಾಲು ಮಾಡಲು ಹೊರಟಿದೆ ಎಂದು ವ್ಯಾಪಾರಿಗಳು ಆರೋಪಿಸಿದರು. ಈಗಾಗಲೇ ಆನ್‌ಲೈನ್ ಮಾರಾಟ ಸೇರಿದಂತೆ ಹಲವು ರಾಜ್ಯಗಳಲ್ಲಿ ಆನ್‌ಲೈನ್ ಸೇವೆಗಳನ್ನು ನಿಷೇಧಿಸಲಾಗಿದೆ. ರಾಜ್ಯದಲ್ಲಿ ಆನ್‌ಲೈನ್ ಸೇವೆಯಿಂದ ವರ್ತಕರ ಬದುಕಿನ ಮೇಲೆ ಬರೆ ಎಳೆಯಲಾಗಿದೆ ಎಂದು ಆರೋಪಿಸಿದರು.

ಆನ್‌ಲೈನ್ ಸೇವೆಯಿಂದ ಚಿಲ್ಲರೆ ವ್ಯಾಪಾರಿಗಳ ಬದುಕಿನ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಲಾರಿ ಮಾಲಕರು, ಕೂಲಿ ಕಾರ್ಮಿಕರಿಗೂ ಅನಾನುಕೂಲವಾಗುತ್ತದೆ. ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಜನಪ್ರತಿಧಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ನಾವು ಬಂದ್ ಮಾಡಲು ಮುಂದಾಗಿದ್ದೇವೆ ಎಂದು ಹೇಳಿದರು.

ಸರಕಾರಕ್ಕೆ ತಿಳಿಸುವೆ

ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಶಾಸಕ ಗೋಪಾಲಯ್ಯ ಅವರು, ವರ್ತಕರ ಬೇಡಿಕೆಗಳ ಬಗ್ಗೆ ಸರಕಾರದೊಂದಿಗೆ ಚರ್ಚಿಸುತ್ತೇನೆ. ಆನ್‌ಲೈನ್ ಮಾರಾಟ ಕ್ರಮ ನಿಷೇಧಿಸುವ ಬಗ್ಗೆ ಸರಕಾರದ ಗಮನಕ್ಕೆ ತಂದು ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News