ಮಹಿಳೆಯರಿಗೆ ಸಚಿವ ಸ್ಥಾನ ನೀಡಲು ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮನವಿ

Update: 2018-12-07 13:49 GMT

ಬೆಂಗಳೂರು, ಡಿ.7: ಮುಂಬರುವ ಸಚಿವ ಸಂಪುಟ ವಿಸ್ತಣೆಯಲ್ಲಿ ಮಹಿಳಾ ಶಾಸಕಿಯೊಬ್ಬರಿಗೆ ಸಚಿವ ಸ್ಥಾನ ನೀಡಬೇಕೆಂದು ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಇಂದಿಲ್ಲಿ ಹೇಳಿದರು.

ಶುಕ್ರವಾರ ನಗರದ ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಮಹಿಳಾ ಶಾಸಕಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರನ್ನು ಸಚಿವ ಸಂಪುಟ ವಿಸ್ತರಣೆಯಲ್ಲಿ ಪರಿಗಣಿಸಿ, ಸಚಿವ ಸ್ಥಾನ ನೀಡಬೇಕು ಎಂದು ಮನವಿ ಮಾಡಿದರು.

ಅದೇ ರೀತಿ, ಮುಂದಿನ ಲೋಕಸಭಾ ಚುನಾವಣೆಯಲ್ಲೂ ಗೆಲ್ಲುವ ಮಹಿಳೆಯರಿಗೆ ಹೆಚ್ಚು ಟಿಕೆಟ್ ನೀಡಬೇಕು ಎಂದು ಈಗಾಗಲೇ ಕಾಂಗ್ರೆಸ್ ಹಿರಿಯ ಮುಖಂಡರಲ್ಲಿ ಮನವಿ ಮಾಡಲಾಗಿದ್ದು, ಕಾಂಗ್ರೆಸ್ ಮಹಿಳಾ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಪ್ರಶಸ್ತಿ ಪ್ರದಾನ: ಮಹಿಳಾ ಕಾಂಗ್ರೆಸ್‌ನಲ್ಲಿ ಉತ್ತಮವಾಗಿ ಕೆಲಸ ಮಾಡಿದ ಕಾರ್ಯಕರ್ತರಿಗೆ ಮುಂದಿನ ಸಾಲಿನಿಂದ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ಪ್ರದಾನಿಸಲು ಚಿಂತನೆ ನಡೆಸಲಾಗಿದೆ. ಈ ಪ್ರಶಸ್ತಿಯನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮ ದಿನದಂದು ಪ್ರದಾನಿಸಲಾಗುವುದೆಂದು ಪುಷ್ಪಾ ಅಮರನಾಥ್ ಪ್ರಕಟಿಸಿದರು.

ಇಂದಿರಾಗಾಂಧಿ ಅವರು ಈ ದೇಶಕ್ಕೆ ನೀಡಿರುವ ಅಪಾರ ಕೊಡುಗೆ, ಕಾರ್ಯಕ್ರಮಗಳನ್ನೇ ಮುಂದಿಟ್ಟುಕೊಂಡು ಮಹಿಳಾ ಕಾರ್ಯಕರ್ತರನ್ನು ಸಂಘಟಿಸಲಾಗುವುದು ಎಂದ ಅವರು, ಇಂದಿರಾ ಗಾಂಧಿ 111ನೇ ಜನ್ಮ ದಿನಾಚರಣೆ ಅಂಗವಾಗಿ ರಾಜ್ಯದೆಲ್ಲೆಡೆ 111 ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂದು ಅವರು ಮಾಹಿತಿ ನೀಡಿದರು.

ಮುಂದಿನ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ. ಈ ನಿಟ್ಟಿನಲ್ಲಿ 124 ಕ್ಷೇತ್ರಗಳಿಗೂ ಕೋ-ಆರ್ಡಿನೇಟರ್ ನೇಮಕ ಮಾಡುವುದಾಗಿ ತಿಳಿಸಿದ ಅವರು, ಮಹಿಳೆಯರಿಗೆ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಶೇ.33 ರಷ್ಟು ಮೀಸಲಾತಿ ಸಿಗಲೇ ಬೇಕು. ಈ ಸಂಬಂಧ ಹೋರಾಟ ನಡೆಸಲಾಗುವುದೆಂದು ಪುಷ್ಪಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News