ದೇಶಭ್ರಷ್ಟ ಅಪರಾಧಿಗಳಿಗೆ ವಿದೇಶಗಳಲ್ಲಿ ರಕ್ಷಣೆ ಸಿಗಬಾರದು: ಪ್ರಧಾನಿ ಮೋದಿ

Update: 2018-12-07 14:14 GMT

ಹೊಸದಿಲ್ಲಿ, ಡಿ.7: ಭಾರತದಲ್ಲಿ ಆರ್ಥಿಕ ವಂಚನೆ ಎಸಗಿ ವಿದೇಶಕ್ಕೆ ಪಲಾಯನ ಮಾಡುವ ಅಪರಾಧಿಗಳಿಗೆ ಅಲ್ಲಿ ಸುರಕ್ಷಿತ ನೆಲೆ ಸಿಗಬಾರದು ಎಂಬ ಭಾರತದ ಪ್ರಯತ್ನಗಳಿಗೆ ಯಶಸ್ಸು ದೊರಕಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ದೈನಿಕ್ ಜಾಗರಣ್’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಕುರಿತು ಭಾರತವು ಅಂತರಾಷ್ಟ್ರೀಯ ಸಮುದಾಯಕ್ಕೆ ನೀಡಿರುವ ಸಲಹೆ ಪರಿಣಾಮ ಬೀರತೊಡಗಿದೆ. ನಮ್ಮ ಅಭಿಯಾನ ಖಂಡಿತಾ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸವಿದೆ ಎಂದರು.

 ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ವಿರುದ್ಧ ಕಠಿಣ, ಕ್ರಿಯಾತ್ಮಕ ಹಾಗೂ ನಿಷ್ಠುರ ಕ್ರಮ ಜರಗಿಸುವ ನಿಟ್ಟಿನಲ್ಲಿ ಜಿ-20 ದೇಶಗಳಿಗೆ ಭಾರತ 9 ಅಂಶಗಳ ಕಾರ್ಯಸೂಚಿಯನ್ನು ಸಲ್ಲಿಸಿದೆ. ಅಪರಾಧ ಕೃತ್ಯಗಳಿಂದ ಸಂಪಾದಿಸಿದ ಆಸ್ತಿ, ಹಣವನ್ನು ಸ್ಥಗಿತಗೊಳಿಸುವುದು, ಅಪರಾಧಿಗಳ ತ್ವರಿತ ಹಸ್ತಾಂತರ, ಅಪರಾಧ ಕೃತ್ಯಗಳಿಂದ ಸಂಪಾದಿಸಿದ ಹಣಗಳ ತ್ವರಿತ ವಾಪಸಾತಿ ಮುಂತಾದ ಕಾನೂನು ಪ್ರಕ್ರಿಯೆಗಳಲ್ಲಿ ಪರಸ್ಪರ ಸಹಕಾರವನ್ನು ವರ್ಧಿಸುವ ಅಗತ್ಯವಿದೆ ಎಂದು ಕಾರ್ಯಸೂಚಿಯಲ್ಲಿ ತಿಳಿಸಲಾಗಿದೆ. ಅಲ್ಲದೆ ದೇಶಭ್ರಷ್ಟ ಆರ್ಥಿಕ ಅಪರಾಧಿಗಳಿಗೆ ವಿದೇಶಗಳು ಪ್ರವೇಶ ನಿರಾಕರಿಸುವ ವ್ಯವಸ್ಥೆಯೊಂದನ್ನು ಜಾರಿಗೊಳಿಸುವಂತೆ ಜಿ-20 ದೇಶಗಳಿಗೆ ಭಾರತ ಕರೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News