ಗುಜರಾತ್:ಬಸ್ಸಿನಲ್ಲಿ ಸಾಗಿಸುತ್ತಿದ್ದ ಕೊರಿಯರ್ ಪಾರ್ಸಲ್‌ಗಳನ್ನು ದೋಚಿದ ದುಷ್ಕರ್ಮಿಗಳು

Update: 2018-12-07 14:21 GMT

ಮೆಹ್ಸಾನಾ,ಡಿ.7: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದರಲ್ಲಿ ಸಾಗಿಸುತ್ತಿದ್ದ ಲಕ್ಷಾಂತರ ರೂ.ಮೌಲ್ಯದ ನಗದು,ಚಿನ್ನ ಮತ್ತು ವಜ್ರಗಳಿದ್ದ ಕೊರಿಯರ್ ಸಂಸ್ಥೆಯ ಪಾರ್ಸಲ್‌ಗಳನ್ನು ಅಪರಿಚಿತ ವ್ಯಕ್ತಿಗಳ ಗುಂಪೊಂದು ದೋಚಿರುವ ಘಟನೆ ಗುರುವಾರ ರಾತ್ರಿ ಮೆಹ್ಸಾನಾ-ಅಹ್ಮದಾಬಾದ್ ಹೆದ್ದಾರಿಯಲ್ಲಿ ನಡೆದಿದೆ.

ಈ ಬಗ್ಗೆ ಮೆಹ್ಸಾನಾ ಜಿಲ್ಲೆಯ ಲಂಘನಾಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,ತನಿಖೆಯು ಪ್ರಗತಿಯಲ್ಲಿದೆ ಎಂದು ಡಿವೈಎಸ್‌ಪಿ ಮಂಜಿತಾ ವಂಝಾರಾ ಅವರು ಶುಕ್ರವಾರ ಸುದ್ದಿಗಾರರಿಗ ತಿಳಿಸಿದರು.

ಕೊರಿಯರ್ ಸಂಸ್ಥೆಯ ನಾಲ್ವರು ಸಿಬ್ಬಂದಿಗಳು ನಗದು,ಚಿನ್ನ ಮತ್ತು ವಜ್ರಗಳಿದ್ದ ಪಾರ್ಸಲ್‌ಗಳೊಂದಿಗೆ ಪಾಲನ್‌ಪುರ-ಅಹ್ಮದಾಬಾದ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಒಂಭತ್ತು ಲೂಟಿಕೋರರೂ ಪ್ರಯಾಣಿಕರ ಸೋಗಿನಲ್ಲಿ ಈ ಬಸ್ಸನ್ನು ಹತ್ತಿದ್ದರು. ಮೆಹ್ಸಾನಾ ಬಿಟ್ಟ ಬಸ್ ವಾಟರ್ ಪಾರ್ಕ್‌ವೊಂದರ ಬಳಿ ತಲುಪಿದಾಗ ಲೂಟಿಕೋರರಲ್ಲೋರ್ವ ಚಾಲಕನ ತಲೆಗೆ ಪಿಸ್ತೂಲು ಹಿಡಿದು ಬಸ್ಸನ್ನು ನಿಲ್ಲಿಸುವಂತೆ ಸೂಚಿಸಿದ್ದ. ಬಸ್ ನಿಂತಾಗ ಲೂಟಿಕೋರರು ಕೊರಿಯರ್ ಸಿಬ್ಬಂದಿಗಳ ಬಳಿಯಿದ್ದ ಪಾರ್ಸಲ್‌ಗಳನ್ನು ಕಿತ್ತುಕೊಂಡು ಕಾರೊಂದರಲ್ಲಿ ಪರಾರಿಯಾಗಿದ್ದರು. ಈ ಬಗ್ಗೆ ಪ್ರಯಾಣಿಕನೋರ್ವನಿಂದ ಮಾಹಿತಿ ಪಡೆದ ಮೆಹ್ಸಾನಾ ಪೊಲೀಸರು ತಡರಾತ್ರಿಯಲ್ಲಿ ಕಾರನ್ನು ಬೆನ್ನಟ್ಟಿದ್ದರು. ಲೂಟಿಕೋರರು ಖೇರಾಲು ಬಳಿ ಕಾರನ್ನು ತೊರೆದು ಪರಾರಿಯಾಗಿದ್ದಾರೆ ಎಂದು ಅವರು ವಿವರಿಸಿದರು.

ದೋಚಲಾಗಿರುವ ವಸ್ತುಗಳ ಮೌಲ್ಯ 10 ಲ.ರೂ.ಗಳೆಂದು ದೂರಿನಲ್ಲಿ ತಿಳಿಸಲಾಗಿದೆ. ಆದರೆ ಪಾರ್ಸಲ್‌ಗಳಲ್ಲಿ 80 ಲ.ರೂ.ಅಧಿಕ ವೌಲ್ಯದ ವಸ್ತುಗಳಿದ್ದವು ಎಂದು ಕೊರಿಯರ್ ಸಂಸ್ಥೆಯ ಅಧಿಕಾರಿ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News