ಜೆಟ್ ಏರ್ ವೇಸ್ ಉಳಿಸಲು ಆಪತ್ಭಾಂದವ ಅಗಲಿದ್ದಾರೆಯೇ ಯೂಸುಫ್ ಅಲಿ ?

Update: 2018-12-07 15:27 GMT
ಎಂ.ಎ ಯೂಸುಫ್ ಅಲಿ 

ಹೊಸದಿಲ್ಲಿ, ಡಿ.7: ದೇಶದ ಎರಡನೇ ಅತಿದೊಡ್ಡ ವಿಮಾನ ಯಾನ ಸಂಸ್ಥೆ ಜೆಟ್ ಏರ್ ವೇಸ್ ಸದ್ಯ ಅಪಾರ ನಷ್ಟದಲ್ಲಿದ್ದು, ಕಾರ್ಯಾಚರಣೆ ಮುಂದುವರಿಸಲು ಯಾರಾದರೂ ತಕ್ಷಣ ಬಂಡವಾಳ ಹೂಡಬೇಕಾದ ಪರಿಸ್ಥಿತಿಯಲ್ಲಿದೆ. ಸಂಸ್ಥೆಯ ಅಧ್ಯಕ್ಷ ನರೇಶ್ ಗೋಯಲ್ ಹೇಗಾದರೂ ಹೂಡಿಕೆದಾರರನ್ನು ತಂದು ಸಂಸ್ಥೆಯನ್ನು ಉಳಿಸಲು ಹೆಣಗಾಡುತ್ತಿದ್ದಾರೆ. 

ಈಗ ಬಂದಿರುವ ಮಾಹಿತಿ ಪ್ರಕಾರ ಅಬುಧಾಬಿಯ ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಯೂಸುಫ್ ಅಲಿ ಎಂ.ಎ ಅವರು ಜೆಟ್ ಏರ್ ವೇಸ್ ಪಾಲಿನ ಆಪತ್ಭಾಂದವ ಆಗುವ ಸಾಧ್ಯತೆ ಇದೆ. ಹೀಗೆಂದು ಇಕಾನಾಮಿಕ್ ಟೈಮ್ಸ್ ವರದಿ ಮಾಡಿದೆ. ಯೂಸುಫ್ ಅಲಿ ವಿಶ್ವಾದ್ಯಂತ ಹೈಪರ್ ಮಾರ್ಕೆಟ್ ಗಳ ಜಾಲ ಇರುವ ಪ್ರತಿಷ್ಠಿತ ಲುಲು ಗ್ರೂಪ್ ಇಂಟರ್ ನ್ಯಾಷನಲ್ ನ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರಾಗಿದ್ದಾರೆ. 

ಅಬುಧಾಬಿಯ ವಿಮಾನಯಾನ ಸಂಸ್ಥೆ ಇತಿಹಾದ್ ಜೊತೆ ಗೋಯಲ್ ಈಗ ಮಾತುಕತೆಯಲ್ಲಿದ್ದಾರೆ. ಈಗಾಗಲೇ ತಮ್ಮ ಸಂಸ್ಥೆಯಲ್ಲಿರುವ 24% ಬಂಡವಾಳವನ್ನು ಹೆಚ್ಚಿಸಿ 49% ಕ್ಕೆ ಏರಿಸುವಂತೆ ಅವರು ಇತಿಹಾದ್ ಅನ್ನು ಒಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ದೇಶೀಯ ವಿಮಾನ ಸಂಸ್ಥೆಯ ಹೆಚ್ಚಿನ ಪಾಲಿನ ಮಾಲಕತ್ವ ಹಾಗು ನಿಯಂತ್ರಣ ಭಾರತೀಯರ ಕೈಯಲ್ಲೇ ಇರಬೇಕು ಎಂಬ ನಿಯಮ ಪಾಲನೆಗೆ ಜೆಟ್ ಸಂಸ್ಥೆಗೆ ಈಗ ಒಬ್ಬ ಭಾರತೀಯನ ಅಗತ್ಯವಿದೆ. ಆ ಸ್ಥಾನಕ್ಕೆ ಯೂಸುಫ್ ಅಲಿ ಬರುವ ಸಾಧ್ಯತೆ ಹೆಚ್ಚಿದೆ ಎಂದು ಇಕಾನಾಮಿಕ್ ಟೈಮ್ಸ್ ವರದಿ ಮಾಡಿದೆ. 

ಇತಿಹಾದ್ ಮತ್ತು ಯೂಸುಫ್ ಅಲಿ ಜೊತೆ ಸೇರಿ ಜೆಟ್ ಏರ್ ವೇಸ್ ನಲ್ಲಿ ಬಂಡವಾಳ ಹೂಡಲಿ ಎಂಬುದು ಗೋಯಲ್ ಉದ್ದೇಶವಾಗಿದೆ. ಇದಕ್ಕಾಗಿ ಇತ್ತೀಚೆಗೆ ಯೂಸುಫ್ ಅಲಿ ಅವರನ್ನು ಗೋಯಲ್ ದೂರವಾಣಿ ಮೂಲಕ ಸಂಪರ್ಕಿಸಿ ವಿವರವಾಗಿ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಹೈಪರ್ ಮಾರ್ಕೆಟ್ ಮತ್ತು ಹೋಟೆಲ್ ನಂತಹ ಉದ್ಯಮಗಳಲ್ಲೇ ಹೆಚ್ಚು ಆಸಕ್ತರಾಗಿರುವ ಯೂಸುಫ್ ಅಲಿ ಸಾಕಷ್ಟು ನಷ್ಟದ ಸಾಧ್ಯತೆಯೇ ಹೆಚ್ಚಿರುವ ವಿಮಾನಯಾನ ಕ್ಷೇತ್ರದಲ್ಲಿ ಹೂಡಿಕೆಗೆ ಆಸಕ್ತಿ ತೋರುವ ಸಾಧ್ಯತೆ ಕಡಿಮೆ ಎಂಬ ಸಂಶಯವೂ ಇದೆ. 

ಈ ವರ್ಷದ ಆರಂಭದಲ್ಲಿ ಯೂಸುಫ್ ಅಲಿ ಅವರು ಎಡಿನ್ ಬರ್ಗ್ ನಲ್ಲಿರುವ ಪ್ರತಿಷ್ಠಿತ ಸ್ಕಾಟಿಷ್ ಹೋಟೆಲ್ ಅನ್ನು 120 ಮಿಲಿಯನ್ ಡಾಲರ್ ಡೀಲ್ ನಲ್ಲಿ ಖರೀದಿಸಿದ್ದರು. ಅವರಿಗೆ ಈಗಾಗಲೇ ಯುನೈಟೆಡ್ ಕಿಂಗ್ ಡಮ್, ಮಧ್ಯ ಪ್ರಾಚ್ಯ ಹಾಗೂ ಭಾರತದಲ್ಲಿ ಒಟ್ಟು 650 ಮಿಲಿಯನ್ ಡಾಲರ್ ಮೌಲ್ಯದ ವಿಲಾಸಿ ಹೋಟೆಲ್ ಸೊತ್ತುಗಳಿವೆ. 

ಇತ್ತೀಚಿಗೆ ಲುಲು ಗ್ರೂಪ್ ಕೇರಳದ ಐಟಿ ಕ್ಷೇತ್ರ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ, ಕೊಚ್ಚಿಯಲ್ಲಿ 50 ಲಕ್ಷ ಚದರ ಅಡಿ ಐಟಿ ಸ್ಥಳವನ್ನು ಅಭಿವೃದ್ಧಿಪಡಿಸಲು 2400 ಕೋಟಿ ರೂ. ಹೂಡಿಕೆ ಮಾಡುವ ಘೋಷಣೆ ಮಾಡಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News