ನಾನು ವಿಸಿಟಿಂಗ್ ಕಾರ್ಡ್‌ನಲ್ಲಿ ಮಾತ್ರ ಸಿಬಿಐ ನಿರ್ದೇಶಕ: ಸುಪ್ರೀಂಕೋರ್ಟ್‌ಗೆ ಅಲೋಕ್ ವರ್ಮ ಹೇಳಿಕೆ

Update: 2018-12-07 16:18 GMT

ಹೊಸದಿಲ್ಲಿ, ಡಿ.7: “ನಾನು ವಿಸಿಟಿಂಗ್ ಕಾರ್ಡ್‌ನಲ್ಲಿ ಮಾತ್ರ ಸಿಬಿಐ ನಿರ್ದೇಶಕನಾಗಿದ್ದೇನೆ. ನನಗೆ ಹುದ್ದೆಯಿದ್ದರೆ ಸಾಲದು, ಕಾರ್ಯನಿರ್ವಹಿಸುವಂತಾಗಬೇಕು. ವರ್ಗಾವಣೆ ಎಂಬ ಪದದ ಸಾಮಾನ್ಯ ಅರ್ಥವನ್ನು ಗಮನಿಸಬೇಕು.ಸಿಬಿಐ ನಿರ್ದೇಶಕರ ಎಲ್ಲಾ ಅಧಿಕಾರವನ್ನೂ ರದ್ದುಪಡಿಸಿರುವುದು ಸಿವಿಸಿ ಮತ್ತು ಸರಕಾರದ ಆದೇಶದಿಂದ ತಿಳಿದುಬರುತ್ತದೆ" ಎಂದು ಸಿಬಿಐಯ ನಿರ್ದೇಶಕ ಅಲೋಕ್ ವರ್ಮ ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ.

ಸಿಬಿಐ ನಿರ್ದೇಶಕರಾದ ಅಲೋಕ್ ವರ್ಮ ಹಾಗೂ ರಾಕೇಶ್ ಅಸ್ತಾನಾರ ನಡುವಿನ ಒಳಜಗಳದ ಬಳಿಕ ವರ್ಮರ ಅಧಿಕಾರವನ್ನು ಕಿತ್ತುಕೊಂಡಿದ್ದ ಕೇಂದ್ರ ಸರಕಾರ ಅವರನ್ನು ಕಳೆದ ಅಕ್ಟೋಬರ್‌ನಲ್ಲಿ ರಜೆಯ ಮೇಲೆ ಕಳುಹಿಸಿತ್ತು. ಇದನ್ನು ಪ್ರಶ್ನಿಸಿ ವರ್ಮ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ತನ್ನನ್ನು ರಜೆಯ ಮೇಲೆ ಕಳುಹಿಸಿರುವುದು ವರ್ಗಾವಣೆ ಮಾಡಿದ್ದಕ್ಕೆ ಸಮವಾಗಿದೆ. ಸಿಬಿಐ ನಿರ್ದೇಶಕರನ್ನು ವರ್ಗಾಯಿಸಲು ಪ್ರಧಾನಿ, ಅತೀ ದೊಡ್ಡ ವಿಪಕ್ಷದ ಮುಖಂಡ ಹಾಗೂ ಸಿಜೆಐ ಅವರು ಸದಸ್ಯರಾಗಿರುವ ಉನ್ನತ ಮಟ್ಟದ ಸಮಿತಿಯ ಅನುಮತಿ ಅಗತ್ಯವಾಗಿದೆ ಎಂದು ವರ್ಮ ವಾದಿಸಿದರು. ಆದರೆ ವರ್ಮರನ್ನು ವರ್ಗಾಯಿಸಿಲ್ಲ. ಅವರನ್ನು ಅಮಾನತು ಮಾಡಲಾಗಿದೆ. ನೇಮಕ ಮಾಡುವ ಪ್ರಾಧಿಕಾರಕ್ಕೆ ಅಮಾನತುಗೊಳಿಸುವ ಅಥವಾ ವಜಾಗೊಳಿಸುವ ಅಧಿಕಾರವೂ ಇದೆ ಎಂದು ಸರಕಾರದ ಪರ ವಕೀಲರಾದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಹೇಳಿದರು. ಶಿಸ್ತು ಕ್ರಮದಡಿ ಮಾಡುವ ವರ್ಗಾವಣೆಗೂ ಮಾಮೂಲಿ ವರ್ಗಾವಣೆಗೂ ವ್ಯತ್ಯಾಸವಿದೆ. ಅಲ್ಲದೆ ಸಿವಿಸಿ ತನ್ನ ಅಧಿಕಾರ ವ್ಯಾಪ್ತಿಯೊಳಗೆ ಕಾರ್ಯನಿರ್ವಹಿಸಿದೆ ಎಂದು ಸಿಬಿಐ ಪರ ವಕೀಲ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ನರಸಿಂಹ ಹೇಳಿದರು. ಈ ಸಂದರ್ಭ ಹೇಳಿಕೆ ನೀಡಿದ ಸಿವಿಸಿ(ಕೇಂದ್ರ ಜಾಗೃತ ಆಯೋಗ) ಪರ ವಕೀಲ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ, ಅಖಿಲ ಭಾರತ ಸೇವೆಯು ಸಿವಿಸಿ ಕಾಯ್ದೆಯಡಿ ಬರುತ್ತದೆ. ಅಧಿಕಾರಿಗಳ ಕಾರ್ಯನಿರ್ವಹಣೆಯ ಮೇಲ್ವಿಚಾರಣೆ ನಡೆಸುವ ಅಧಿಕಾರ ಆಯೋಗಕ್ಕಿದೆ. ಸಿಬಿಐ ನಿರ್ದೇಶಕರು ಐಪಿಎಸ್(ಇಂಡಿಯನ್ ಪೊಲೀಸ್ ಸರ್ವಿಸ್) ಶ್ರೇಣಿಯಡಿ ಬರುವ ಕಾರಣ ಅಖಿಲ ಭಾರತ ಸೇವೆಯ ನಿಯಮ ಇವರಿಗೂ ಅನ್ವಯಿಸುತ್ತದೆ . ಒಂದು ವೇಳೆ ಕಾನೂನು ಮೀರಿ ನಡೆದರೆ ನಾನು ಕೂಡಾ ರಾಷ್ಟ್ರಪತಿ, ಶಾಸಕಾಂಗ ಹಾಗೂ ಸುಪ್ರೀಂಕೋರ್ಟ್‌ಗೆ ಉತ್ತರ ನೀಡಬೇಕು ಎಂದರು.

ಗಂಭೀರವಾದ ಪ್ರಕರಣಗಳ ತನಿಖೆ ನಡೆಸುವ ಬದಲು ಇಬ್ಬರೂ ಅಧಿಕಾರಿಗಳು ಪರಸ್ಪರರ ವಿರುದ್ಧ ತನಿಖೆ ನಡೆಸುತ್ತಿದ್ದರು, ಪರಸ್ಪರರ ಕಚೇರಿ, ನಿವಾಸದ ಮೇಲೆ ದಾಳಿ ಕೈಗೊಳ್ಳುತ್ತಿದ್ದರು. ಬೆಕ್ಕುಗಳಂತೆ ಕಿತ್ತಾಡುತ್ತಿದ್ದ ಇಬ್ಬರು ಅಧಿಕಾರಿಗಳ ವಿರುದ್ಧ ಬೇರೆ ಯಾವುದೇ ಆಯ್ಕೆ ಇರಲಿಲ್ಲ. ಆದ್ದರಿಂದ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಸೂಕ್ತವಾದ ಕ್ರಮವನ್ನು ಕೈಗೊಂಡಿದೆ ಎಂದು ಮೆಹ್ತಾ ಹೇಳಿದರು. ವರ್ಮ ವಿರುದ್ಧದ ಕ್ರಮವನ್ನು ಕಾಂಗ್ರೆಸ್‌ನ ಲೋಕಸಭಾ ಮುಖಂಡ ಮಲ್ಲಿಕಾರ್ಜುನ ಖರ್ಗೆ ಪರ ವಕೀಲ ಕಪಿಲ್ ಸಿಬಲ್ ಹಾಗೂ ಎನ್‌ಜಿಒ ಸಂಸ್ಥೆಯ ಪರ ಹಿರಿಯ ವಕೀಲ ದುಷ್ಯಂತ ದವೆ ವಿರೋಧಿಸಿದರು. ಮೂರು ದಿನಗಳ ವಾದವಿವಾದವನ್ನು ಗುರುವಾರ ಮುಕ್ತಾಯಗೊಳಿಸಿದ ಸಿಜೆಐ ರಂಜನ್ ಗೊಗೋಯ್, ನ್ಯಾಯಮೂರ್ತಿಗಳಾದ ಎಸ್‌ಕೆ ಕೌಲ್ ಮತ್ತು ಕೆಎಂ ಜೋಸೆಫ್ ಅವರಿದ್ದ ನ್ಯಾಯಪೀಠವು, ಅಲೋಕ್ ವರ್ಮರ ವಿರುದ್ಧ ಕೇಳಿ ಬಂದ ಭ್ರಷ್ಟಾಚಾರ ಆರೋಪದ ಬಗ್ಗೆ ಸಿವಿಸಿ ಮೂರು ತಿಂಗಳು ಕಾದ ಬಳಿಕ ಕ್ರಮ ಕೈಗೊಂಡಿರುವುದನ್ನು ಪ್ರಶ್ನಿಸಿತು ಮತ್ತು ತನ್ನ ತೀರ್ಪನ್ನು ಕಾಯ್ದಿರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News