2 ಸಾವಿರ ಕೆಜಿ ಶ್ರೀಗಂಧ ಎಣ್ಣೆ ಖರೀದಿ: ಜಾಗತಿಕ ಟೆಂಡರ್ ರದ್ದುಗೊಳಿಸಲು ಆಗ್ರಹ

Update: 2018-12-07 16:08 GMT

ಬೆಂಗಳೂರು, ಡಿ.6: ಕೆಎಸ್‌ಡಿಎಲ್‌ನಲ್ಲಿ ಕರೆದಿರುವ ರೈತ ವಿರೋಧಿ ಜಾಗತಿಕ ಟೆಂಡರನ್ನು ರದ್ದುಗೊಳಿಸಿ, 2 ಸಾವಿರ ಕೆಜಿ ಶ್ರೀಗಂಧ ಎಣ್ಣೆ ಖರೀದಿಸಲು ಮುಂದಾಗಿರುವ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ರವಿಕುಮಾರ್‌ರನ್ನು ವರ್ಗಾಹಿಸಬೇಕೆಂದು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ-ಉಳಿಸಿ ಹೋರಾಟ ಸಮಿತಿ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಜೋಗಿಲ ಸಿದ್ದರಾಜು, ನಿಯಮಿತಕ್ಕೆ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡಿರುವ ಎಂ.ಆರ್.ರವಿಕುಮಾರ್ ಕಾರ್ಖಾನೆಯ ನಿಯಮಾವಳಿಗಳನ್ನು ಉಲ್ಲಂಘಿಸಿ, ತೆಗೆದುಕೊಂಡಿರುವ ತೀರ್ಮಾನಗಳಿಂದಾಗಿ ನಿಯಮಿತವನ್ನು ಉಳಿಸುವ ಬದಲಾಗಿ ಅದರ ಅದಃಪತನ ಮಾಡುವ ನಿಟ್ಟಿನಲ್ಲಿ ಸರ್ವಾಧಿಕಾರಿ ಧೋರಣೆಯನ್ನು ತೋರುತ್ತಿದ್ದಾರೆ ಎಂದು ಆರೋಪ ಮಾಡಿದರು.

ನಿರ್ದೇಶಕರು ಜಾಗತಿಕ ಟೆಂಡರ್‌ನಲ್ಲಿ 2ಸಾವಿರ ಕೆ.ಜಿ.ಶ್ರೀಗಂಧದ ಎಣ್ಣೆಯನ್ನು ಖರೀದಿಸಲು ಹೊರಟಿರುವುದು ಕೆಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 350ರಿಂದ 400 ಕೋಟಿ ಜಾಗತಿಕ ಟೆಂಡರ್ ಕರೆಯುವ ಮುನ್ನ ಸಂಸ್ಥೆಯ ಆಡಳಿತ ಮಂಡಳಿ, ಇಲಾಖೆ ಮಂತ್ರಿ ಹಾಗೂ ಉನ್ನತ ಅಧಿಕಾರಿಗಳ ಗಮನಕ್ಕೆ ತರಬೇಕೆಂಬುದರ ನಿಯಮವಿದ್ದರೂ, ಮರೆಮಾಚಿ ಟೆಂಡರ್ ಕರೆಯಲಾಗಿದೆ ಎಂದು ದೂರಿದರು.

ಶ್ರೀಗಂಧ ಬೆಳೆಸಿ ಸಿರಿವಂತರಾಗಿ ಎಂಬ ಯೋಜನೆಯಡಿಯಲ್ಲಿ ಶ್ರೀಗಂಧ ಮರವನ್ನು ಬೆಳೆಯುತ್ತಿರುವ ರಾಜ್ಯದ 600ಕ್ಕೂ ಹೆಚ್ಚು ರೈತರಿಂದ ಶ್ರೀಗಂಧದ ಎಣ್ಣೆಯನ್ನು ದಾಸ್ತಾನು ಮಾಡಲಾಗಿದೆ. ಹೀಗಾಗಿ, ಟೆಂಡರ್‌ನ್ನು ಕೂಡಲೇ ರದ್ದುಪಡಿಸಲು ಕ್ರಮಕೈಗೊಳ್ಳಬೇಕು. ರೈತರ ಹಾಗೂ ಕಾರ್ಮಿಕರ ಹಿತ ಕಾಪಾಡುವಲ್ಲಿ ಸರಕಾರ ಮಧ್ಯ ಪ್ರವೇಶ ಮಾಡಬೇಕೆಂದು ಆಗ್ರಹ ಮಾಡಿದರು.

ರಾಜ್ಯದಲ್ಲಿ ಶ್ರೀಗಂಧ ಮರದ ಕೊರತೆಯಾದಾಗ ವಿದೇಶದಿಂದ ಎಣ್ಣೆಯನ್ನು ಖರೀದಿಸುವ ಬದಲು ಶ್ರೀಗಂಧ ಬೆಳೆಸುವ ಪಕ್ಕದ ರಾಜ್ಯಗಳಾದ ಕೇರಳ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಿಂದಲೇ ಖರೀದಿಸಲು ಆದೇಶ ಹೊರಡಿಸಬೇಕು ಹಾಗೂ ಸಂಸ್ಥೆಯ ನಿಯಮಾವಳಿಯಂತೆ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ಹಿರಿಯ ಐಎಎಸ್ ಅಧಿಕಾರಿಗಳನ್ನೇ ನೇಮಕ ಮಾಡಬೇಕೆಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News