ಬಾಬರಿ ಮಸೀದಿ ಧ್ವಂಸ ಪ್ರಕರಣ: ನ್ಯಾ.ಲಿಬ್ರಹನ್ ಆಯೋಗದ ವರದಿ ಜಾರಿಗೆ ಎಸ್‌ಡಿಪಿಐ ಒತ್ತಾಯ

Update: 2018-12-07 16:11 GMT

ಬೆಂಗಳೂರು, ಡಿ.7: ಉತ್ತರಪ್ರದೇಶದ ಫೈಝಾಬಾದ್ ಜಿಲ್ಲೆಯಲ್ಲಿರುವ ಸುಮಾರು 500 ವರ್ಷ ಹಳೆಯದಾದ ಬಾಬರಿ ಮಸೀದಿಯನ್ನು 1992ರ ಡಿಸೆಂಬರ್ 6ರಂದು ಕೋಮುವಾದಿ ದುಷ್ಟರು ಧ್ವಂಸಗೊಳಿಸುವುದರ ಮೂಲಕ ನಮ್ಮ ದೇಶದ ಕೋಮು ಸಾಮರಸ್ಯ, ಜಾತ್ಯತೀತ ನಿಲುವು ಹಾಗೂ ಸಾಂವಿಧಾನಿಕ ಮೌಲ್ಯಗಳ ಕೊಲೆ ಮಾಡಲು ಪ್ರಯತ್ನಿಸಿದರು ಎಂದು ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ಸಂಜೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಅಂಬೇಡ್ಕರ್ ವೃತ್ತದಲ್ಲಿ ಎಸ್‌ಡಿಪಿಐ ಹಾಗೂ ದಲಿತ ಸಂಘರ್ಷ ಸಮಿತಿ (ಪರಿವರ್ತನವಾದ) ವತಿಯಿಂದ ಆಯೋಜಿಸಿದ್ದ ಬಾಬರಿ ಮಸೀದಿ ಧ್ವಂಸದ ವಿರುದ್ಧ ಸಾಂಕೇತಿಕ ಸಂತಾಪ ಮತ್ತು ಡಾ.ಬಿ.ಆರ್.ಅಂಬೇಡ್ಕರ್‌ರವರ 62ನೇ ಪರಿನಿಬ್ಬಾಣ ದಿನವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಈ ಘಟನೆಯಿಂದಾಗಿ ದೇಶದ ಹಲವಾರು ಭಾಗಗಳಲ್ಲಿ ಶಾಂತಿ ಸುವ್ಯವಸ್ಥೆ ಭಂಗವಾಗಿ ಅಲ್ಲಲ್ಲಿ ಕೋಮುಗಲಭೆ ನಡೆದು, ಹಲವಾರು ಅಮಾಯಕರು ತಮ್ಮ ಜೀವವನ್ನು ಬಲಿ ಕೊಡಬೇಕಾಯಿತು. ಈ ಘಟನೆ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ರಚಿಸಿದ್ದ ನ್ಯಾ.ಎಂ.ಎಸ್.ಲಿಬ್ರಹನ್ ಆಯೋಗವು ಕೇಂದ್ರ ಸರಕಾರಕ್ಕೆ 2009ರ ಜೂ.30ರಂದು ವರದಿ ನೀಡಿದೆ ಎಂದು ಅವರು ಹೇಳಿದರು.

ಆದರೆ, ಇದುವರೆಗೂ ವರದಿಯನ್ನು ಅನುಷ್ಠಾನಗೊಳಿಸಲು ಯಾವುದೇ ಪ್ರಯತ್ನ ನಡೆದಿಲ್ಲ. 26 ವರ್ಷಗಳು ಕಳೆದು ಹೋದರೂ ಈಗಲೂ ಆರೋಪಿಗಳು ರಾಜಕೀಯ ಅಧಿಕಾರವನ್ನು ಬಳಸಿಕೊಂಡು ತಾವು ಎಸಗಿದ ಕೃತ್ಯವನ್ನು ಸಮರ್ಥಿಸಿಕೊಳ್ಳುತ್ತಾ, ಒಂದು ನಿರ್ದಿಷ್ಟ ಸಮುದಾಯಕ್ಕೆ ಮತೀಯವಾಗಿ ನೋವುಂಟು ಮಾಡುವ ರೀತಿಯಲ್ಲಿ ವರ್ತಿಸುತ್ತಿರುವುದು ಭಾರತೀಯ ಸಂವಿಧಾನದ ಅಪಹಾಸ್ಯವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಆರೋಪಿಗಳು ರಾಜಕೀಯವಾಗಿ ಯಾವುದೇ ಉನ್ನತ ಸ್ಥಾನದಲ್ಲಿದ್ದರೂ ಅವರನ್ನು ಅಧಿಕಾರದಿಂದ ಉಚ್ಛಾಟನೆ ಮಾಡಬೇಕು ಮತ್ತು ನ್ಯಾ.ಲಿಬ್ರಹನ್ ಆಯೋಗದ ವರದಿಯನ್ನು ಯಥಾಪ್ರಕಾರ ಜಾರಿಗೊಳಿಸಿ, ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅಫ್ಸರ್ ಕೊಡ್ಲಿಪೇಟೆ ಒತ್ತಾಯಿಸಿದರು.

ದಲಿತ ಮುಖಂಡ ಚಿನ್ನಸ್ವಾಮಿ ಮಾತನಾಡಿ, ದೇಶದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಬೇಕಾದರೆ ದಲಿತರು ಮತ್ತು ಮುಸ್ಲಿಮರು ಒಂದಾಗಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಟಿಪ್ಪುಸುಲ್ತಾನ್ ಅವರ ಮಾದರಿಯಲ್ಲಿ ಹೋರಾಟವನ್ನು ಕೋಮುವಾದಿ ಶಕ್ತಿಗಳ ವಿರುದ್ಧ ಮಾಡಬೇಕು ಮತ್ತು ರಾಜಕೀಯವಾಗಿ ಬೆಳೆದು ಅಧಿಕಾರ ಹಿಡಿಯಬೇಕು. ಸಮಾಜದ ಮತ್ತು ರಾಜಕೀಯದ ಪ್ರಮುಖ ಸ್ಥಾನಗಳಲ್ಲಿ ದಲಿತರು, ಮುಸಲ್ಮಾನರು ಬರಬೇಕು ಎಂದರು.

ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ಹೊಸಕೋಟೆಯ ಅಧ್ಯಕ್ಷ ಸಯ್ಯದ್ ಅಯಾಝ್, ದಲಿತ ಮುಖಂಡರಾದ ಬಿ.ಎಂ.ವೆಂಕಟೇಶ್, ಎಂ.ಆರ್.ವೆಂಕಟೇಶ್, ಚಿನ್ನಸ್ವಾಮಿ, ಎಸ್‌ಡಿಪಿಐ ಕಾಡುಗೋಡಿ ಅಧ್ಯಕ್ಷ ಆಸಿಫ್ ಅಕ್ರಮ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News