ನಗರ ಮಾಲಿನ್ಯ ನಿಯಂತ್ರಣ: ಕಠಿಣ ಕ್ರಮಕ್ಕೆ ಮುಂದಾದ ಮಾಲಿನ್ಯ ನಿಯಂತ್ರಣ ಮಂಡಳಿ

Update: 2018-12-07 17:03 GMT

ಬೆಂಗಳೂರು, ಡಿ.7: ನಗರದಲ್ಲಿ ಮುಂದಿನ 5-6 ವರ್ಷಗಳಲ್ಲಿ ಅಧಿಕಗೊಂಡಿರುವ ವಾಯುಮಾಲಿನ್ಯ ಪ್ರಮಾಣವನ್ನು ಶೇ.30 ರಷ್ಟು ಕಡಿಮೆ ಮಾಡಬೇಕು ಎಂದು ಕೇಂದ್ರದ ಪರಿಸರ ಸಚಿವಾಲಯ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

ಈ ನಿಟ್ಟಿನಲ್ಲಿ ಮಾಲಿನ್ಯ ಮಂಡಳಿಯು ಮೆಟ್ರೋ ಹಾಗೂ ಇತರೆ ಕಟ್ಟಡ ಕಾಮಗಾರಿಗಳ ಮೇಲೆ ತೀವ್ರ ನಿಗಾವಹಿಸಲು ಮುಂದಾಗಿದೆ. ಅದರ ಜತೆಗೆ ಹಳೆಯ ವಾಹನಗಳ ಸಂಚಾರವನ್ನೂ ನಿರ್ಬಂಧ ಮಾಡಬೇಕು ಎಂಬ ಪ್ರಸ್ತಾವನೆಯನು ಮರು ಪರಿಶೀಲಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲು ಸಿದ್ಧತೆ ನಡೆಸಲಾಗಿದೆ. ಮಾಲಿನ್ಯ ನಿಯಂತ್ರಣ ಸಂಬಂಧ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ವಿಶೇಷ ಸಮಿತಿ ರಚನೆಯಾಗಿದೆ. ಈ ಸಮಿತಿಯು ಮಾಲಿನ್ಯ ನಿಯಂತ್ರಣ ಸಂಬಂಧ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತದೆ. ನಗರದ ನಿಮ್ಹಾನ್ಸ್, ವಿಕ್ಟೋರಿಯಾ ಆಸ್ಪತ್ರೆ, ಮೆಜೆಸ್ಟಿಕ್ ರೈಲು ನಿಲ್ದಾಣ ಸೇರಿ ವಿವಿಧ ಕಡೆಗಳಲ್ಲಿನ 21 ವಾಯುಗುಣಮಟ್ಟ ತಪಾಸಣಾ ಕೇಂದ್ರಗಳಲ್ಲಿ ಜನರ ಶ್ವಾಸಕೋಶಕ್ಕೆ ಹಾನಿಯಾಗುವ ಮಟ್ಟಿಗೆ ವಾಯುಮಾಲಿನ್ಯ ದಾಖಲಾಗಿದೆ.

ಬೈಯಪ್ಪನಹಳ್ಳಿಯಿಂದ ವೆಟ್‌ಫೀಲ್ಡ್, ನಾಯಂಡಹಳ್ಳಿಯಿಂದ ಕೆಂಗೇರಿ ಹಾಗೂ ಮತ್ತಿತರ ಮಾರ್ಗಗಳಲ್ಲಿ ಮೆಟ್ರೋ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಈ ಮಾರ್ಗದಲ್ಲಿನ ಕಾಮಗಾರಿಯಿಂದ ಅತಿಯಾದ ಧೂಳು ಬರುತ್ತಿದೆ ಎಂದು ಹಲವು ಬಾರಿ ಸಾರ್ವಜನಿಕರು, ಪ್ರಯಾಣಿಕರು ದೂರು ಸಲ್ಲಿಸಿದ್ದರು. ಹೀಗಾಗಿ, ಮಂಡಳಿ ಸೂಚನೆ ನೀಡಿದ್ದರಿಂದ ಪ್ರತಿಮಾರ್ಗದಲ್ಲಿಯೂ ನೀರು ಹಾಕುವುದು, ಬ್ಯಾರಿಕೇಡ್ ಅಳವಡಿಕೆ ಮಾಡಿ ಕ್ರಮ ಕೈಗೊಳ್ಳಲಾಗುತ್ತಿದೆ.

ಅಲ್ಲದೆ, ಈ ಹಿಂದೆ ಬಿಎಂಆರ್‌ಸಿಎಲ್‌ಗೆ ಕಾಮಗಾರಿ ನಡೆಸುವ ಸ್ಥಳದಲ್ಲಿ ವಾಯುಗುಣಮಟ್ಟ ತಪಾಸಣಾ ಯಂತ್ರವನ್ನು ಅಳವಡಿಸಬೇಕು ಎಂದು ಸೂಚನೆಯನ್ನೂ ನೀಡಲಾಗಿತ್ತು. ಅದರಿಂದಾಗಿ ಎಲ್ಲ ಮಾರ್ಗಗಳಲ್ಲಿ ಒಂದು ಯಂತ್ರವನ್ನು ಅಳವಡಿಸಿದ್ದು, ಇದೇ ಮಾರ್ಗದಲ್ಲಿ ಅಪಾರ್ಟ್‌ಮೆಂಟ್ ಕಟ್ಟಡಗಳ ಕಾಮಗಾರಿಯಲ್ಲಿ ಧೂಳು ಉಂಟಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಹಳೆಯ ವಾಹನಗಳ ನಿಷೇಧ: ನಗರದಲ್ಲಿ 74 ಲಕ್ಷ ವಾಹನಗಳು ನೋಂದಣಿಯಾಗಿವೆ. ಹೊರಭಾಗಗಳಿಂದ ನಗರಕ್ಕೆ ಸಾವಿರಾರು ವಾಹನಗಳು ನಿತ್ಯ ಬರುತ್ತಿವೆ. ಈ ವಾಹನಗಳು ಬಿಡುವ ಹೊಗೆ ನಿಯಂತ್ರಿಸಲು ಮಂಡಳಿಯು ಸಾರಿಗೆ ಇಲಾಖೆಯೊಂದಿಗೆ ಕಾರ್ಯನಿರ್ವಹಿಸಬೇಕಿದೆ. ಒಟ್ಟು ವಾಹನಗಳಲ್ಲಿ ಶೇ.22 ರಷ್ಟು ವಾಹನಗಳು 15 ವರ್ಷ ಹಳೆಯದಾಗಿವೆ. 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನ ಮತ್ತು 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ವಾಹನ ನಿಷೇಧಿಸಬೇಕೆಂಬ ಪ್ರಸ್ತಾವವನ್ನು ಮಂಡಳಿಯು ಕೇಂದ್ರ ಸರಕಾರಕ್ಕೆ ಸಲ್ಲಿಸಿತ್ತು. ಆದರೆ, ಅದನ್ನು ಸರಕಾರ ಇನ್ನೂ ಪರಿಗಣಿಸಿಲ್ಲ. ಹೀಗಾಗಿ, ಮರು ಪರಿಶೀಲಿಸುವಂತೆ ಕೋರಲು ಮಂಡಳಿ ನಿರ್ಧರಿಸಿದೆ. ಜತೆಗೆ ಸಾರಿಗೆ ಇಲಾಖೆ ಸಹಭಾಗಿತ್ವದಲ್ಲಿ ವಾಹನಗಳ ಮಾಲಿನ್ಯ ಪ್ರಮಾಣ ತಪಾಸಣೆಗೆ ಹೆಚ್ಚು ಒತ್ತು ನೀಡಲು ಗಮನಹರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News