ಮತ್ತೊಂದು ಸಾಧನೆಗೆ ಸಜ್ಜಾಗಿದೆ ಭಾರತೀಯ ನೌಕಾಪಡೆಯ ಮಹಿಳಾ ತಂಡ

Update: 2018-12-08 03:44 GMT

ಚಂಡೀಗಢ, ಡಿ.8: ಭಾರತೀಯ ನೌಕಾಪಡೆಯ ಐಎನ್‌ಎಸ್‌ವಿ ತಾರಿಣಿ ಹಡಗಿನಲ್ಲಿ ಎಂಟು ತಿಂಗಳ ಸುದೀರ್ಘ ವಿಶ್ವ ಪರ್ಯಟನೆ ಕೈಗೊಂಡ ಭಾರತೀಯ ನೌಕಾಪಡೆಯ ಮಹಿಳಾ ತಂಡ ಇದೀಗ ಮತ್ತೊಂದು ಐತಿಹಾಸಿಕ ಸಾಧನೆಗೆ ಸಜ್ಜಾಗುತ್ತಿದೆ. ಈ ಕೆಚ್ಚೆದೆಯ ಮತ್ತು ಸ್ಫೂರ್ತಿದಾಯಕ ತಂಡ 2020ರಲ್ಲಿ ಕೇಪ್‌ನಿಂದ ರಿಯೋವರೆಗೆ ನಡೆಯುವ ರೇಸ್‌ನಲ್ಲಿ ಪಾಲ್ಗೊಳ್ಳಲಿದೆ.

ರಾಯಲ್ ಕೇಪ್ ಯಾಚ್ ಕ್ಲಬ್ ಈ ಸ್ಪರ್ಧೆ ಆಯೋಜಿಸಿದೆ. 'ಕೇಪ್ ಟೂ ರಿಯೊ ರೇಸ್' ದಕ್ಷಿಣ ಅಟ್ಲಾಂಟಿಕ್ ಸಾಗರದಲ್ಲಿ ನಡೆಯಲಿದ್ದು, ವಿಶ್ವದ ಅತ್ಯಂತ ಸುಂದರ ಬಂದರು ಪಟ್ಟಣಗಳಾದ ಕೇಪ್‌ಟೌನ್ ಹಾಗೂ ರಿಯೊ ಡಿ ಜನೈರೊ ನಗರಗಳನ್ನು ಸಂಪರ್ಕಿಸಲಿದೆ. ಮೊದಲ ಆವೃತ್ತಿಯ ಸ್ಪರ್ಧೆ 1971ರಲ್ಲಿ ನಡೆದಿತ್ತು. ಇದರಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಹಲವು ಮಂದಿ ಯಾಚಿಂಗ್ ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಮಿಲಿಟರಿ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿರುವ ಲೆಫ್ಟಿನೆಂಟ್ ಕಮಾಂಡರ್ ವರ್ಟಿಕಾ ಜೋಶಿ ಮತ್ತು ಲೆಫ್ಟಿನೆಂಟ್ ಬಿ.ಐಶ್ವರ್ಯ ಈ ವಿಷಯ ಪ್ರಕಟಿಸಿದರು. ಇದೀಗ ತರಬೇತಿ ಪಡೆಯುತ್ತಿರುವ 12-15 ಮಂದಿಯನ್ನೂ ಸೇರಿದ ನಮ್ಮ ತಂಡ 'ಕೇಪ್ ಟೂ ರಿಯೊ ರೇಸ್‌'ನಲ್ಲಿ ಪಾಲ್ಗೊಳ್ಳಲಿದೆ ಎಂದು ವಿವರಿಸಿದರು. ನೌಕಾಪಡೆಗೆ ಸೇವೆ ಸಲ್ಲಿಸುವ ಜತೆಗೆ ಸಾಹಸ ಕ್ರೀಡೆಯನ್ನು ಆಯ್ದುಕೊಳ್ಳುವಂತೆ ಯುವ ಸಮೂಹವನ್ನು ಆಕರ್ಷಿಸುವುದು ಇದರ ಉದ್ದೇಶ ಎಂದು ಹೇಳಿದರು.

"ನಮ್ಮ ಸಾಧನೆ, ಮಹಿಳೆಯರ ಬಗೆಗಿನ ಮನೋಭಾವವನ್ನು ಬದಲಿಸುವಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿದೆ. ಈ ಸ್ಫೂರ್ತಿಯಿಂದ ಮುಂದೆಯೂ ಇಂಥ ಸಾಧನೆಗಳನ್ನು ಮಾಡಲು ಉತ್ಸುಕರಾಗಿದ್ದೇವೆ" ಎಂದು ಐಶ್ವರ್ಯ ಹೇಳಿದರು.

"ಲಿವರ್‌ಪೂಲ್‌ನಿಂದ ಆರಂಭವಾಗುವ ಕ್ಲಿಪ್ಪರ್ ರೇಸ್‌ನಲ್ಲೂ ಪಾಲ್ಗೊಳ್ಳುವ ಯೋಚನೆ ಇದೆ" ಎಂದು ಸ್ಪಷ್ಟಪಡಿಸಿದರು. 40 ಸಾವಿರ ನಾಟಿಕಲ್ ಮೈಲು ದೂರ ಕ್ರಮಿಸುವ ಸ್ಪರ್ಧೆಯನ್ನು 13 ಪ್ರತ್ಯೇಕ ಸ್ಪರ್ಧೆಗಳಾಗಿ ವಿಂಗಡಿಸಿ, ಎಲ್ಲ 13 ರೇಸ್‌ಗಳಲ್ಲಿ ಒಟ್ಟಾರೆ ಅತ್ಯುತ್ತಮ ಸಾಧನೆ ತೋರುವ ತಂಡಕ್ಕೆ ಕ್ಲಿಪ್ಪರ್ ರೇಸ್ ಟ್ರೋಫಿ ನೀಡಲಾಗುತ್ತಿದ್ದು, ವಿಶ್ವಾದ್ಯಂತ ಸ್ಪರ್ಧಿಗಳನ್ನು ಆಕರ್ಷಿಸುವ ಈ ಸ್ಪರ್ಧೆ ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News