ರಾಮ ಮಂದಿರ ನಿರ್ಮಾಣಕ್ಕೆ ತಡೆಯಾದಲ್ಲಿ ಸರಕಾರ ಉರುಳಿಸುತ್ತೇನೆ: ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ

Update: 2018-12-08 09:38 GMT

ಹೊಸದಿಲ್ಲಿ, ಡಿ.8: ಕೇಂದ್ರ ಅಥವಾ ಉತ್ತರ ಪ್ರದೇಶ ಸರಕಾರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು  ವಿರೋಧಿಸಿದಲ್ಲಿ ಸರಕಾರವನ್ನು ಉರುಳಿಸುವುದಾಗಿ ಬಿಜೆಪಿ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಎಚ್ಚರಿಸಿದ್ದಾರೆ.

“ನಮ್ಮ ಪ್ರಕರಣ (ರಾಮ ಮಂದಿರ) ಜನವರಿಯಲ್ಲಿ ವಿಚಾರಣೆಗೆ ಬರಲಿದೆ. ನಾವು ಎರಡು ವಾರಗಳಲ್ಲಿ ಗೆಲ್ಲಬಲ್ಲೆವು. ನನ್ನ ವಿರುದ್ಧದ ಪಕ್ಷಗಳು ಕೇಂದ್ರ ಮತ್ತು ಉತ್ತರ ಪ್ರದೇಶ ಸರಕಾರ. ಅವರಿಗೆ ನನ್ನನ್ನು ವಿರೋಧಿಸುವ ಧೈರ್ಯವಿದೆಯೇ?, ಹಾಗೇನಾದರೂ ಆದರೆ ಸರಕಾರ ಉರುಳಿಸುತ್ತೇನೆ. ಅವರು ಹಾಗೆ ಮಾಡಲಿಕ್ಕಿಲ್ಲ ಎಂದು ನನಗೆ ಗೊತ್ತು'' ಎಂದು ಶುಕ್ರವಾರ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ  ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು ಹೇಳಿದರು.

“ನನಗೆ ವೈಯಕ್ತಿಕವಾಗಿ ತಿಳಿದಿರುವ ಮುಸ್ಲಿಮರು ತಮಗೆ ರಾಮ ಮಂದಿರ ನಿರ್ಮಾಣಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು ಹೇಳಿದ್ದಾರೆ'' ಎಂದು ಸ್ವಾಮಿ ಹೇಳಿದರು.

``ಬಾಬರ್ ಆಕ್ರಮಿಸಿದ ಜಮೀನು ತಮ್ಮದು ಎಂದು ಸುನ್ನಿ ವಕ್ಫ್ ಮಂಡಳಿ ಪ್ರಕರಣ ದಾಖಲಿಸಿತ್ತು. ಅವರು ತಮಗೆ ಬಾಬರಿ ಮಸೀದಿ ಮರುನಿರ್ಮಾಣ ಮಾಡಲಿದೆ ಎಂದು ಹೇಳಿಲ್ಲ. ಆ ಜಮೀನಿನ ಮೇಲಿನ ಹಕ್ಕು ತಮ್ಮದು ಎಂದಷ್ಟೇ ಅವರು ಹೇಳಿದ್ದರು. ರಾಮ ಜನ್ಮಭೂಮಿ ನ್ಯಾಸ್ ಮತ್ತು ನಿರ್ಮೋಹಿ ಅಖಾಡ ಪ್ರಕಾರ ಅಲ್ಲಿ ಎರಡು ದೇವಳಗಳಿದ್ದವು ಹಾಗೂ ಅವರು ಅದರ ಟ್ರಸ್ಟಿಗಳಾಗಿರುವುದರಿಂದ ಭೂಮಿ ಅವರಿಗೆ ನೀಡಬೇಕೆಂದು ಹೇಳಿದ್ದರು. ಪ್ರಕರಣ ಆಲಿಸಿದ ಅಲಹಾಬಾದ್ ಹೈಕೋರ್ಟ್ ಅದು ರಾಮ ಜನ್ಮಭೂಮಿ ಎಂದು ಹೇಳಿ ಎರಡು ಗುಂಬಝ್ ಹಿಂದುಗಳಿಗೆ ಹಾಗೂ ಒಂದು ಮುಸ್ಲಿಮರಿಗೆ ಹೋಗುತ್ತದೆ ಎಂದಿತ್ತು,'' ಎಂದು ಸ್ವಾಮಿ ವಿವರಿಸಿದರು.

“ಸಂವಿಧಾನ ಕೊಡಮಾಡಿದ ಹಕ್ಕಿನನ್ವಯು ನನಗೆ ಪ್ರಾರ್ಥಿಸುವ ಅಧಿಕಾರವಿದೆ. ನನ್ನ ನಂಬಿಕೆಯ ಪ್ರಕಾರ ರಾಮ ಇಲ್ಲಿಯೇ ಹುಟ್ಟಿದ್ದು. ನನಗೆ ಇಲ್ಲಿ ದೊಡ್ಡ ದೇವಳ ಬೇಕು. ಮುಸ್ಲಿಮರು ಕೇವಲ ಆಸ್ತಿಗಾಗಿ ಕೇಳುತ್ತಾರೆ. ಅದು ಮೂಲಭೂತ ಹಕ್ಕಲ್ಲ. ನನ್ನ ಮೂಲಭೂತ ಹಕ್ಕು ಜಮೀನಿನ ಮೇಲಿನ ಅವರ ಹಕ್ಕಿಗಿಂತ ಮಿಗಿಲು ಎಂದು ಪರಿಗಣಿಸಿ ನನ್ನ ಅಪೀಲನ್ನು ಸ್ವೀಕರಿಸಬೇಕು'' ಎಂದು ಸ್ವಾಮಿ ಹೇಳಿದರು.

ವಿವಾದಿತ ಸ್ಥಳ ರಾಮಜನ್ಮಭೂಮಿ ಎಂದು ಪುರಾತತ್ವ ಸರ್ವೇಕ್ಷಣಾ ಇಲಾಖೆಯೂ ತಿಳಿಸಿದೆ  ಎಂದು ಅವರು ಹೇಳಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News