ವಿಧವೆಯರನ್ನು ಹೀಯಾಳಿಸಿ ಸ್ತ್ರೀಕುಲವನ್ನು ಅವಮಾನಿಸಿದ ಮೋದಿ: ಮಾಜಿ ಸಿಎಂ ಸಿದ್ದರಾಮಯ್ಯ

Update: 2018-12-08 11:24 GMT

ಬೆಂಗಳೂರು, ಡಿ.8: ಪ್ರಧಾನಿ ನರೇಂದ್ರ ಮೋದಿಯವರು ವಿಧವೆಯರನ್ನು ಹೀಯಾಳಿಸುವ ಮೂಲಕ ಸಮಸ್ತ ಸ್ತ್ರೀಕುಲವನ್ನು ಅವಮಾನಿಸಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗೆ ರಾಜಸ್ಥಾನದಲ್ಲಿ ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, “ವಿಧವಾ ಪಿಂಚಣಿ ಯೋಜನೆಯಲ್ಲಿ ಕಾಂಗ್ರೆಸ್ ಅವ್ಯವಹಾರ ನಡೆಸಿದೆ. ಯುಪಿಎ ಆಡಳಿತಾವಧಿಯಲ್ಲಿ ಹಗರಣ ನಡೆದಿದ್ದು, ಕಾಂಗ್ರೆಸ್ ನಾಯಕರು ಸಾರ್ವಜನಿಕರ ಹಣ ದೋಚಿದ್ದಾರೆ. ‘ಹುಟ್ಟದೇ ಇರುವ’ ಹೆಣ್ಣುಮಕ್ಕಳನ್ನು ‘ವಿಧವೆ’ಯರು ಎಂದು ಪಟ್ಟಿ ಮಾಡಲಾಗಿದ್ದು, ‘ಪಿಂಚಣಿ ಸ್ವೀಕರಿಸಲಾಗಿದೆ” ಎಂದು ಗಂಭೀರ ಆರೋಪ ಮಾಡಿದರು.

“ ಇನ್ನೂ ಹುಟ್ಟದ ಹುಡುಗಿಯೊಬ್ಬಳು ವಿಧವೆಯಾಗುತ್ತಾಳೆ ಹಾಗು ಪಿಂಚಣಿ ಬರುತ್ತದೆ. ಈ ಹಣವನ್ನು ಪಡೆದ ವಿಧವೆಯರು ಯಾರು?, ಈ ಹಣವನ್ನು ಸ್ವೀಕರಿಸಿದ ಬ್ಯಾಂಕ್ ಪುಸ್ತಕ ಯಾವ ಕಾಂಗ್ರೆಸ್ ವಿಧವೆಗೆ ಸೇರಿದ್ದು” ಎಂದು ಮೋದಿ ಪ್ರಶ್ನಿಸಿದ್ದರು. ಪ್ರಧಾನಿಯವರು ಪರೋಕ್ಷವಾಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರನ್ನು ಅವಮಾನಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

ಇದೀಗ ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, “ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ವಿಧವೆಯರನ್ನು ಹೀಯಾಳಿಸುವ ಮೂಲಕ ಸಮಸ್ತ ಸ್ತ್ರೀಕುಲವನ್ನು ಅವಮಾನಿಸಿದ್ದಾರೆ. ತನ್ನ ತಾಯಿ ಕೂಡಾ ವಿಧವೆ ಎನ್ನುವುದನ್ನು ಮರೆತಿರುವ ಮೋದಿಯವರು ದ್ವೇಷಾಸೂಯೆಯ ರಸಾತಲ‌ ತಲುಪಿದ್ದಾರೆ. ಅವರು ಇಂತಹ ಮಾನಸಿಕ ಅಸ್ವಸ್ಥತೆಯಿಂದ ಹೊರಬರಲಿ ಎಂದು ಪ್ರಾರ್ಥಿಸುತ್ತೇನೆ” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News