ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಜಾಮೀನು ಅರ್ಜಿ ತಿರಸ್ಕೃತ

Update: 2018-12-08 11:41 GMT

ಅಹ್ಮದಾಬಾದ್, ಡಿ.8: ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ ಜಾಮೀನು ಅರ್ಜಿಯನ್ನು ಗುಜರಾತ್ ರಾಜ್ಯದ ಬಾನಸ್ಕಂತ ಜಿಲ್ಲೆಯ ಪಾಲನ್ಪುರ್ ನ್ಯಾಯಾಲಯ ತಿರಸ್ಕರಿಸಿದೆ. ಸುಮಾರು 22 ವರ್ಷ ಹಳೆಯದಾದ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ ಅವರು ಈ ವರ್ಷದ ಸೆಪ್ಟೆಂಬರ್ ತಿಂಗಳಿನಿಂದ ಜೈಲಿನಲ್ಲಿದ್ದಾರೆ.

ಅನಧಿಕೃತವಾಗಿ ಸೇವೆಗೆ ಗೈರು ಹಾಜರಾದ ಆರೋಪದಲ್ಲಿ 2015ರಲ್ಲಿ ಪೊಲೀಸ್ ಇಲಾಖೆಯಿಂದ ಭಟ್ ಉಚ್ಛಾಟನೆಗೊಂಡಿದ್ದರು. ಅವರು 1996ರಲ್ಲಿ ಬಾನಸ್ಕಂತ ಜಿಲ್ಲೆಯ ಎಸ್‍ಪಿ ಆಗಿ ಸೇವೆ ಸಲ್ಲಿಸುತ್ತಿದ್ದರು. ಆ ವರ್ಷ ಪೊಲೀಸರು ವಕೀಲರಾಗಿದ್ದ ಸುಮೇರ್ ಸಿಂಗ್ ರಾಜಪುರೋಹಿತ್ ಎಂಬವರನ್ನು ಬಂಧಿಸಿದ್ದರಲ್ಲದೆ ಅವರು ತಂಗಿದ್ದ ಪಾಲನ್ಪುರದ ಹೋಟೆಲ್ ಕೊಠಡಿಯಿಂದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದರು.

ರಾಜಸ್ಥಾನದ ಪಾಲಿ ಎಂಬಲ್ಲಿನ ವಿವಾದಿತ ಜಮೀನೊಂದನ್ನು ಹಸ್ತಾಂತರಿಸುವ ಸಲುವಾಗಿ ರಾಜಪುರೋಹಿತ್ ‍ನನ್ನು ಬಲವಂತ ಪಡಿಸಲು ಆತನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿತ್ತು ಎಂದು ರಾಜಸ್ಥಾನ ಪೊಲೀಸರು ನಂತರ ಹೇಳಿಕೊಂಡಿದ್ದರು.

ಈ ಪ್ರಕರಣದ ಸಮಗ್ರ ವಿಚಾರಣೆ ಆಗ್ರಹಿಸಿ ಮಾಜಿ ಪೊಲೀಸ್ ಇನ್‍ಸ್ಪೆಕ್ಟರ್ ಐ ಬಿ ವ್ಯಾಸ್ 1999ರಲ್ಲಿ ಗುಜರಾತ್ ಹೈಕೋರ್ಟಿನ ಮೊರೆ ಹೋಗಿದ್ದರು. ಈ ವರ್ಷದ ಜೂನ್ ತಿಂಗಳಲ್ಲಿ ಹೈಕೋರ್ಟ್ ಈ ಪ್ರಕರಣವನ್ನು ರಾಜ್ಯ ಸಿಐಡಿಗೆ ವಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News