ನರಭಕ್ಷಕರನ್ನು ಸಾಕುತ್ತಿರುವ ಉತ್ತರ ಪ್ರದೇಶ ಸರಕಾರ

Update: 2018-12-10 04:23 GMT

ಉತ್ತರ ಪ್ರದೇಶದ ಬುಲಂದ್ ಶಹರ್‌ನಲ್ಲಿ ಸಂಘಪರಿವಾರದ ಗುಂಪು ಪೊಲೀಸ್ ಅಧಿಕಾರಿಯನ್ನು ಬರ್ಬರವಾಗಿ ಕೊಂದಿರುವ ಪ್ರಕರಣದ ತನಿಖೆ ತಿರುವುಗಳನ್ನು ಪಡೆಯುತ್ತಿದೆ. ‘ಘಟನೆಯ ಹಿಂದೆ ದೊಡ್ಡದೊಂದು ಸಂಚಿದೆ’ ಎಂದು ಉತ್ತರ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಬೆನ್ನಿಗೇ, ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ‘‘ಇದೊಂದು ಆಕಸ್ಮಿಕ ಘಟನೆ’’ ಎಂದು ತೀರ್ಪು ನೀಡಿ ಬಿಟ್ಟರು. ಘಟನೆ ನಡೆದಾಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪ್ರತಿಕ್ರಿಯಿಸಬೇಕಾಗಿದ್ದ ಮುಖ್ಯಮಂತ್ರಿ ಎರಡು ದಿನಗಳ ಬಳಿಕ ಈ ಹೇಳಿಕೆಯನ್ನು ನೀಡಿದರು. ಘಟನೆಯ ಕುರಿತಂತೆ ಒಂದು ವಿಷಾದವನ್ನು ವ್ಯಕ್ತಪಡಿಸದ ಆದಿತ್ಯನಾಥ್, ತನಿಖೆ ನಡೆಯುವ ಮೊದಲೇ ‘ಇದೊಂದು ಆಕಸ್ಮಿಕ’ ಎಂದು ಹೇಳಿರುವುದು, ತನಿಖೆಯ ದಾರಿ ತಪ್ಪಿಸುವ ಪ್ರಯತ್ನದ ಭಾಗವಾಗಿದೆ. ತನಿಖೆಯ ದಾರಿ ಯಾವ ದಿಕ್ಕಿಗೆ ಸಾಗಬೇಕು ಎನ್ನುವ ಕುರಿತಂತೆ ತನಿಖಾಧಿಕಾರಿಗಳಿಗೆ ಆ ಮೂಲಕ ಪರೋಕ್ಷ ಸಂದೇಶವನ್ನು ರವಾನಿಸಿದ್ದಾರೆ. ಹತ್ಯೆ ‘ಆ್ಯಕ್ಸಿಡೆಂಟ್’ ಅಲ್ಲ, ಬದಲಿಗೆ ಆದಿತ್ಯನಾಥ್ ಮುಖ್ಯಮಂತ್ರಿಯಾಗಿರುವುದೇ ಉತ್ತರ ಪ್ರದೇಶದ ಪಾಲಿನ ಭೀಕರ ‘ಆ್ಯಕ್ಸಿಡೆಂಟ್’ ಎಂದು ದೇಶ ಭಾವಿಸುವಂತಾಗಿದೆ.

ಹತ್ಯೆಯಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ಮುಖಂಡರು ಭಾಗವಹಿಸಿರುವುದು ಈಗಾಗಲೇ ವೀಡಿಯೊ ತುಣುಕುಗಳಿಂದ ಬಯಲಾಗಿದೆ. ಜೊತೆಗೆ ಕೊಲೆಗೀಡಾದ ಅಧಿಕಾರಿಗಳ ಬಗ್ಗೆ ಬಿಜೆಪಿ ಮುಖಂಡರು ಈಗಾಗಲೇ ಅಸಹನೆಯ ಮಾತನ್ನಾಡಿದ್ದಾರೆ. ಅಖ್ಲಾಕ್ ತನಿಖೆಯನ್ನೂ ಈ ಅಧಿಕಾರಿ ಮಾಡಿರುವುದರಿಂದ, ಸಹಜವಾಗಿಯೇ ಸ್ಥಳೀಯ ಸಂಘಪರಿವಾರದ ಕಾರ್ಯಕರ್ತರಿಗೆ ಇವರ ಮೇಲೆ ದ್ವೇಷವಿತ್ತು. ಸಂಘಪರಿವಾರ ಸ್ಥಳೀಯವಾಗಿ ಸಮಾವೇಶ ನಡೆಸಿ ಕೋಮುಉದ್ವಿಗ್ನತೆ ಸೃಷ್ಟಿಸಲು ಯತ್ನಿಸಿದಾಗಲೆಲ್ಲ ಸುಬೋಧ್ ಸಿಂಗ್ ಅದನ್ನು ತಡೆದಿದ್ದಾರೆ. ಆದುದರಿಂದ, ಸುಬೋಧ್ ಸಿಂಗ್ ಅವರನ್ನು ಕೊಲ್ಲುವುದಕ್ಕಾಗಿಯೇ ಸಂಘಪರಿವಾರ ಸಂಚೊಂದನ್ನು ರೂಪಿಸಿತ್ತೇ ಎನ್ನುವುದು ತನಿಖೆಯಿಂದ ಹೊರ ಬರಬೇಕಾಗಿದೆ.

ಗೋಹತ್ಯೆ ನಡೆದಿದೆ ಎನ್ನುವ ಸಂಘಪರಿವಾರದ ಆರೋಪವೇ ದೊಡ್ಡ ಸುಳ್ಳಾಗಿದೆ. ಗೋಮಾಂಸಕ್ಕಾಗಿ ಹತ್ಯೆ ನಡೆಸುವವರು ಗೋವುಗಳನ್ನು ಸಾರ್ವಜನಿಕ ಸ್ಥಳದಲ್ಲಿ ತೂಗಿ ಇಡುವ ಪ್ರಶ್ನೆಯೇ ಇಲ್ಲ. ಇಲ್ಲಿ ಎಲ್ಲರಿಗೂ ಕಾಣುವಂತೆ ಗೋವುಗಳನ್ನು ನೇತಾಡಿಸಲಾಗಿತ್ತು. ಬಳಿಕ ವಿವಿಧ ವದಂತಿಗಳನ್ನು ಹರಡಲಾಯಿತು. 25 ಹಸುಗಳ ಮೃತದೇಹ ದೊರಕಿದೆ ಎಂದು ಮಾಧ್ಯಮಗಳ ಮೂಲಕವೂ ಸುಳ್ಳು ಹರಡಿತು. ಇದಾದ ಬಳಿಕ ಸಂಘಪರಿವಾರಕ್ಕೆ ಸಂಬಂಧಿಸಿದ ನಿರ್ದಿಷ್ಟ ಕಾರ್ಯಕರ್ತರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು. ಅವರ ಗುರಿ ಸುಬೋಧ್ ಸಿಂಗ್ ಆಗಿದ್ದರು. ಹಲ್ಲೆ ನಡೆಸಿರುವುದು ಮಾತ್ರವಲ್ಲ, ಅವರನ್ನು ಗುಂಡಿಕ್ಕಿ ಕೊಂದು ಹಾಕಿದ್ದರು. ಈ ಗೋವುಗಳು ಎಲ್ಲಿಂದ ಬಂತು, ಯಾರು ತಂದು ಹಾಕಿದರು ಎನ್ನುವುದು ಪತ್ತೆ ಹಚ್ಚಿದರೆ, ಪ್ರಕರಣದ ಅರ್ಧ ತನಿಖೆ ಪೂರ್ತಿಗೊಂಡಂತೆಯೇ ಸರಿ. ಆದರೆ ಪ್ರಕರಣಗಳ ತನಿಖೆ ಬಿರುಸಾಗುತ್ತಿದ್ದಂತೆಯೇ ವರ್ಗಾವಣೆಗಳು ನಡೆಯುತ್ತಿವೆ. ಬುಲಂದ್ ಶಹರ್‌ನಲ್ಲಿ ತನಗೆ ಬೇಕಾದ ಅಧಿಕಾರಿಯನ್ನು ಆದಿತ್ಯನಾಥ್ ತಂದು ನಿಲ್ಲಿಸುತ್ತಿದ್ದಾರೆ. ತನಿಖೆಯ ದಾರಿ ತಪ್ಪುವ ಎಲ್ಲ ಸಾಧ್ಯತೆಗಳು ಕಾಣುತ್ತಿವೆ. ಬಹುಶಃ ಈ ಹತ್ಯೆ ಸಾಮಾನ್ಯ ನಾಗರಿಕನೊಬ್ಬನದ್ದಾಗಿದ್ದರೆ ಪೊಲೀಸರೂ ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲವೇನೋ? ಪೊಲೀಸರೇ ಆ ಹತ್ಯೆಯನ್ನು ಮುಚ್ಚಿ ಹಾಕುವ ಸಾಧ್ಯತೆಯಿತ್ತು. ಯಾಕೆಂದರೆ ದೇಶದ ವಿವಿಧ ಭಾಗಗಳಲ್ಲಿ ಗುಂಪುಗಳಿಂದ ನಡೆದ ಹತ್ಯೆ ಪೊಲೀಸರ ಕಾರಣದಿಂದಲೇ ಮುಚ್ಚಿ ಹೋಗಿದೆ. ಇದೀಗ ರಕ್ತದ ರುಚಿ ಹತ್ತಿದ ಮೃಗಗಳು ಪೊಲೀಸರ ಮೇಲೆಯೇ ಬಿದ್ದಿವೆ.

ಆರೋಪಿಗಳ ಬಂಧನವಾಗದೇ ಇದ್ದರೆ ಮುಂದಿನ ದಿನಗಳಲ್ಲಿ ಪೊಲೀಸರು ತಮ್ಮ ಕರ್ತವ್ಯವನ್ನು ನಿರ್ವಹಿಸುವುದು ಉತ್ತರ ಪ್ರದೇಶದಲ್ಲಿ ಕಷ್ಟವಾಗಬಹುದು. ಈ ಪ್ರಕರಣದಲ್ಲಿ ಸಂಘಪರಿವಾರದ ಹಿನ್ನೆಲೆಯಿರುವ ಪೊಲೀಸ್ ಸಿಬ್ಬಂದಿಯ ಕೈವಾಡಗಳನ್ನೂ ನಾವು ನಿರಾಕರಿಸುವಂತಿಲ್ಲ. ಈ ಎಲ್ಲ ಕಾರಣಗಳಿಂದ ಉನ್ನತ ತನಿಖಾ ಸಂಸ್ಥೆಯೇ ವಿಚಾರಣೆ ನಡೆಸುವುದು ಒಳಿತು. ಆದರೆ ದೊಡ್ಡ ಸಮಸ್ಯೆಯೆಂದರೆ, ರಾಜಕೀಯ ಹಸ್ತಕ್ಷೇಪಗಳಿಂದ ಎಲ್ಲ ತನಿಖಾ ಸಂಸ್ಥೆಗಳೂ ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿರುವಾಗ, ನ್ಯಾಯಾಂಗವಲ್ಲದೆ ಇನ್ನಾರೂ ಸುಬೋಧ್ ಸಿಂಗ್‌ಗೆ ನ್ಯಾಯವನ್ನು ನೀಡಲಾರರು. ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಆರೋಪಿ ಒಬ್ಬ ಯೋಧ ಎನ್ನುವುದು ಇನ್ನೊಂದು ಆಘಾತಕಾರಿ ಅಂಶವಾಗಿದೆ. ಕೋಮುಗಲಭೆಗಳಿಗೆ ಸೇನಾ ಯೋಧರನ್ನು ಸಂಘಪರಿವಾರ ಬಳಸಿಕೊಳ್ಳುತ್ತಿದೆ ಎನ್ನುವುದು ಇತ್ತೀಚೆಗೆ ಕೇಳಿ ಬರುತ್ತಿರುವ ಆರೋಪವಾಗಿದೆ. ಸಮಾಜದಲ್ಲಿ ಹಾನಿಯನ್ನು ಗೈದು, ಅಮಾಯಕರಂತೆ ಸೇನಾ ಶಿಬಿರಗಳನ್ನು ಸೇರಿಕೊಂಡು ಕಾನೂನಿನ ಕೈಯಿಂದ ಪಾರಾಗುವುದು ಇವರಿಗೆ ಸುಲಭ. ಬುಲಂದ್ ಶಹರ್ ಪ್ರಕರಣದಲ್ಲೂ ಇದೇ ನಡೆದಿದೆ. ಗಲಭೆಯಲ್ಲಿ ಭಾಗವಹಿಸಿದ ಯೋಧ, ಬಳಿಕ ತಕ್ಷಣವೇ ತನ್ನ ಶಿಬಿರವನ್ನು ಸೇರಿಕೊಂಡಿದ್ದಾನೆ.

ಆದರೆ ವೀಡಿಯೊಗಳಲ್ಲಿ ಈತನ ಮುಖಚಹರೆ ಕಾಣಿಸಿಕೊಂಡ ಪರಿಣಾಮವಾಗಿ ಈತನೀಗ ಪೊಲೀಸರ ವಶವಾಗಿದ್ದಾನೆ. ಈತನನ್ನು ಮುಂದಿಟ್ಟು ತನಿಖೆ ನಡೆಸಿದರೆ, ಸೇನೆಯೊಳಗಿರುವ ಸಂಘಪರಿವಾರ ಮನಸ್ಸಿನ ತರುಣರು ಸಮಾಜದಲ್ಲಿ ನಡೆಸಿದ ಅನಾಹುತಗಳ ವಿವರಗಳೂ ಹೊರ ಬರಬಹುದು. ದೇಶ ಕಾಯುವುದೆಂದರೆ ಗಡಿಗಳನ್ನು ಕಾಯುವುದಷ್ಟೇ ಅಲ್ಲ. ದೇಶವೆಂದರೆ ಕೇವಲ ಬೌಗೋಳಿಕ ಗಡಿರೇಖೆಗಳಲ್ಲ. ತನ್ನದೇ ದೇಶದೊಳಗೆ ಬೆಂಕಿ ಹಚ್ಚಿದ ಯೋಧನೊಬ್ಬ ಗಡಿಯಲ್ಲಿ ಯಾವ ಶತ್ರುಗಳಿಗಾಗಿ ಕಾಯುತ್ತಾನೆ? ಇಂತಹ ಮನಸ್ಥಿತಿ ಹೊಂದಿದ ಯೋಧರಿಂದ ದೇಶದ ರಕ್ಷಣೆಯಾದೀತು ಎಂದು ಭಾವಿಸುವುದು ಸಾಧ್ಯವೇ? ಪೊಲೀಸ್ ಇಲಾಖೆಯನ್ನು ದುರುಪಯೋಗಗೊಳಿಸಿದಂತೆಯೇ ಸಂಘಪರಿವಾರ ಸೇನೆಯನ್ನು ಕೂಡ ದುರುಪಯೋಗಗೊಳಿಸುತ್ತಿದೆ ಎನ್ನುವುದಕ್ಕೆ ಬುಲಂದ್ ಶಹರ್ ಗಲಭೆಯಲ್ಲಿ ಭಾಗಿಯಾದ ಯೋಧನೇ ಸಾಕ್ಷಿ.

ಈ ಯೋಧ ಕಾರ್ಯನಿರ್ವಹಿಸುತ್ತಿದ್ದುದು ಶ್ರೀನಗರದಲ್ಲಿ. ಸಂಘಪರಿವಾರದ ದ್ವೇಷ ಮನಸ್ಥಿತಿಯನ್ನು ಹೊಂದಿರುವ ಇಂತಹ ಯೋಧರು ಕಾಶ್ಮೀರದಲ್ಲಿ ಶಾಂತಿಯನ್ನು ಹೇಗೆ ಸೃಷ್ಟಿಸಬಲ್ಲರು? ತಮ್ಮ ಊರಲ್ಲೇ ದ್ವೇಷದ ಬೆಂಕಿ ಹಚ್ಚುವ ಇಂತಹ ಯೋಧರು, ಕಾಶ್ಮೀರದ ಜನರ ಕುರಿತಂತೆ ಹೇಗೆ ಪ್ರೀತಿಯನ್ನು ಸುರಿಸಬಲ್ಲರು? ತಮ್ಮ ದ್ವೇಷವನ್ನು ಇವರು ಅಮಾಯಕ ಕಾಶ್ಮೀರಿಗಳ ಮೇಲೆ ತೋರಿಸಲಾರರು ಎಂದು ಭಾವಿಸುವುದು ಹೇಗೆ? ಅಲ್ಲಿನ ಜನರು ಸೇನೆಯ ಮೇಲೆ ವಿಶ್ವಾಸವನ್ನು ಕಳೆದುಕೊಳ್ಳುವುದಕ್ಕೆ ಇಂತಹ ಕೋಮುವಾದಿ ಮನಸ್ಥಿತಿಯ ಯೋಧರು ಕೂಡ ಕಾರಣರು. ಕಾಶ್ಮೀರದ ಸ್ಥಿತಿಯನ್ನು ವಿಷಮಗೊಳಿಸುವುದರ ಹಿಂದೆ, ಕಾಶ್ಮೀರಿಗಳನ್ನು ಭಾರತದಿಂದ ದೂರವಾಗಿಸುವುದರ ಹಿಂದೆ ಇಂತಹ ಯೋಧರ ಪ್ರಯತ್ನಗಳು ಬಹುದೊಡ್ಡದಿದೆ. ಆದುದರಿಂದ, ಸೇನೆಯೊಳಗಿರುವ ಸಂಘಪರಿವಾರ ಮನಸ್ಥಿತಿಗಳನ್ನು ಗುರುತಿಸುವ ಕೆಲಸವೂ ದೇಶದ ಭದ್ರತೆಯ ದೃಷ್ಟಿಯಿಂದ ಅತ್ಯಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News