ಹಾಕಿ ಆಡಿ ಇತಿಹಾಸ ಸೃಷ್ಟಿಸಲಿರುವ ಅಲಿಗಢ ವಿವಿ ಬಾಲಕಿಯರು

Update: 2018-12-10 04:35 GMT

ಅಲೀಗಢ, ಡಿ.10: ಈ ಬಾರಿಯ ವಿಶ್ವಕಪ್ ಹಾಕಿ ಭಾರತದಲ್ಲಿ ಅದರಲ್ಲೂ ಮುಖ್ಯವಾಗಿ ಅಲೀಗಢ ಮುಸ್ಲಿಂ ವಿಶ್ವವಿದ್ಯಾನಿಲಯ (ಎಎಂಯು)ದಲ್ಲಿ ಪುಟ್ಟ ಕ್ರಾಂತಿಗೆ ಕಾರಣವಾಗಲಿದೆ. 1920ರಲ್ಲಿ ಆರಂಭವಾದ ಬಳಿಕ ಮೊಟ್ಟಮೊದಲ ಬಾರಿಗೆ ಎಎಂಯು ಮಹಿಳಾ ಹಾಕಿ ತಂಡ ರೂಪಿಸಿದೆ. ದೇಶಕ್ಕಾಗಿ ಹಾಕಿ ಆಡುವ ಕನಸನ್ನು ಇಲ್ಲಿನ ವಿದ್ಯಾರ್ಥಿನಿಯರು ಕಾಣುತ್ತಿದ್ದಾರೆ.

ಇನ್ನೂ 13 ವರ್ಷದ ಬಾಲಕಿ ನಸೀಮಾ ಜೆಹ್ರಾ ಕಥೆ ಕೇಳಿ. ಇತ್ತೀಚಿನವರೆಗೂ ಈಕೆ ನಿದ್ರೆಯಲ್ಲಿ ತನ್ನ ಹಾಸಿಗೆಯಿಂದ ಕೆಳಗೆ ಬೀಳುತ್ತಿದ್ದಳು. ಕಾರಣ ಏನು ಗೊತ್ತೇ? ಆಕೆ ತಮ್ಮ ತಂಡದ ಪರವಾಗಿ ಬಹಳಷ್ಟು ಬಾರಿ ತಾನು ಗೋಲು ಬಾರಿಸಿದಂತೆ ಮತ್ತು ತಂಡದ ಜಯಕ್ಕೆ ಕಾರಣವಾದ ಕನಸು ಕಾಣುತ್ತಿದ್ದಳು!

ತಂಡದ ಮತ್ತೊಬ್ಬ ಸದಸ್ಯೆ ಅಲಿಯಾ ರಶೀದ್ ಹೋಗುವಲ್ಲೆಲ್ಲ ಹಾಕಿ ಸ್ಟಿಕ್ ಜತೆಗಿರುತ್ತದೆ. ಅದು ಆಕೆಯ ಬದುಕಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ತರಗತಿಗೂ ಇದನ್ನು ಹಿಡಿದುಕೊಂಡೇ ಬರುತ್ತಾಳೆ. "ಏನು ಮಾಡುವುದು? ನಮಗೆ ಹಾಕಿ ಗೀಳು" ಎಂದು ನಸೀಮಾ ಮತ್ತು ಅಲುಯಾ ಹೇಳುತ್ತಾರೆ.

ಮುಸ್ಲಿಂ ಬಾಲಕಿಯರು ಈ ರಾಷ್ಟ್ರೀಯ ಕ್ರೀಡೆಗೆ ತೆರೆದುಕೊಳ್ಳುವ ಎಎಂಯು ಯೋಜನೆ ಇದೀಗ ಕಾರ್ಯರೂಪಕ್ಕೆ ಬಂದಿದೆ. ವಿವಿಯ ಮೊಟ್ಟಮೊದಲ ಮಹಿಳಾ ಹಾಕಿ ತಂಡದಲ್ಲಿ ಅಬ್ದುಲ್ ಬಶೀರ್ ಖಾನ್ ಯೂನಿಯನ್ ಹೈಸ್ಕೂಲ್‌ನ ಈ ಇಬ್ಬರು ಬಾಲಕಿಯರು ಸ್ಥಾನ ಪಡೆದಿದ್ದಾರೆ. ಹೀಗೆ ಒಟ್ಟು 10 ಶಾಲೆಗಳ ಆಯ್ದ ಬಾಲಕಿಯರು ಈ ಕ್ರಾಂತಿಗೆ ಸಜ್ಜಾಗಿದ್ದಾರೆ.

ಎಲ್ಲವೂ ಸುಸೂತ್ರವಾಗಿ ನಡೆದರೆ ಎಎಂಯು ಬಾಲಕಿಯರು ತಮ್ಮ ಮೊಟ್ಟಮೊದಲ ಹಾಕಿ ಪಂದ್ಯವನ್ನು ಮುಂದಿನ ಫೆಬ್ರವರಿಯಲ್ಲಿ ನಡೆಯುವ ಅಂತರ ಶಾಲಾ ಸ್ಪರ್ಧೆಗಳಲ್ಲಿ ಆಡಲಿದ್ದಾರೆ. ಇದಕ್ಕೆ ಸಿದ್ಧತೆ ನಡೆಯುತ್ತಿದ್ದು, ಹಾಕಿ ಜ್ವರದ ಕಾವು ಏರುತ್ತಲೇ ಇದೆ. ವಿವಿ ಮೈದಾನದಲ್ಲಿ ಈ ಬಾಲಕಿಯರ ತಂಡ, ಭಾರತದ ಮಾಜಿ ಅಂತಾರಾಷ್ಟ್ರೀಯ ಆಟಗಾರ ಅನೀಸುರ್ರಹ್ಮಾನ್ ಮಾರ್ಗದರ್ಶನದಲ್ಲಿ ನಿರಂತರ ಅಭ್ಯಾಸ ನಡೆಸುತ್ತಿದೆ. ಕಿರಿಯರ ಉತ್ಸಾಹ ಕಂಡು ಪದವಿ ವಿದ್ಯಾರ್ಥಿನಿಯರು ಕೂಡಾ ಹಾಕಿ ಅಭ್ಯಾಸದಲ್ಲಿ ತೊಡಗಿದ್ದಾರೆ. ತರಗತಿ ಮುಗಿದ ಬಳಿಕ ಹಾಕಿ ಆಡಲು ಹಾಸ್ಟೆಲ್ ವಾರ್ಡನ್‌ನಿಂದ ವಿಶೇಷ ಅನುಮತಿ ಪಡೆದಿದ್ದಾಗಿ ಅಂತಿಮ ಪದವಿ ವಿದ್ಯಾರ್ಥಿನಿ ಅಫ್ರೀನ್ ಅಲಿ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News