ವಿದೇಶಿ ಶಕ್ತಿಗಳು ನನ್ನನ್ನು ಬೆದರಿಸುತ್ತಿವೆ: ಲಂಕಾ ಅಧ್ಯಕ್ಷ

Update: 2018-12-10 18:31 GMT

ಕೊಲಂಬೊ, ಡಿ. 10: ಶ್ರೀಲಂಕಾದ ಇಂದಿನ ಬಿಕ್ಕಟ್ಟು ಬಾಹ್ಯ ಮತ್ತು ಸ್ಥಳೀಯ ಮೌಲ್ಯಗಳ ನಡುವಿನ ಸಂಘರ್ಷದ ಫಲಿತಾಂಶ ಎಂಬುದಾಗಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಅಭಿಪ್ರಾಯಪಟ್ಟಿದ್ದಾರೆ.

‘ಬಾಹ್ಯ ಶಕ್ತಿಗಳು’ ತನಗೆ ಬೆದರಿಕೆಯೊಡ್ಡಿವೆ ಎಂಬುದಾಗಿಯೂ ಅವರು ಆರೋಪಿಸಿದ್ದಾರೆ.

ಅಕ್ಟೋಬರ್ 26ರಂದು ಪ್ರಧಾನಿ ವಿಕ್ರಮೆಸಿಂಘೆಯನ್ನು ವಜಾಗೊಳಿಸಿ, ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸರನ್ನು ನೂತನ ಪ್ರಧಾನಿಯಾಗಿ ಅಧ್ಯಕ್ಷರು ನೇಮಿಸಿದಂದಿನಿಂದ ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ನೆಲೆಸಿದೆ.

ಸಿರಿಸೇನ ಬಳಿಕ, ಅವಧಿ ಮುಗಿಯಲು ಇನ್ನೂ 20 ತಿಂಗಳು ಇರುವಂತೆಯೇ ಸಂಸತ್ತನ್ನು ವಿಸರ್ಜಿಸಿದರು ಹಾಗೂ ಮಧ್ಯಂತರ ಚುನಾವಣೆಯನ್ನು ಘೋಷಿಸಿದರು.

ಆದರೆ, ಸಂಸತ್ತನ್ನು ವಿಸರ್ಜಿಸುವ ನಿರ್ಧಾರವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿತು ಹಾಗೂ ಚುನಾವಣೆಯ ಸಿದ್ಧತೆಗಳನ್ನೂ ಸ್ಥಗಿತಗೊಳಿಸಿತು.

ಬಳಿಕ ಸಂಸತ್‌ನಲ್ಲಿ, ಸಿರಿಸೇನ ಪ್ರತಿಷ್ಠಾಪಿಸಿದ ಪ್ರಧಾನಿ ರಾಜಪಕ್ಸ ಮೂರು ಬಾರಿ ವಿಶ್ವಾಸಮತದಲ್ಲಿ ಸೋಲನುಭವಿಸಿದರು.

ಆದಾಗ್ಯೂ, ಅಧ್ಯಕ್ಷರು ಈ ನಿಟ್ಟಿನಲ್ಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅಲ್ಲಿ ರಾಜಕೀಯ ಅನಿಶ್ಚಿತತೆ ಮುಂದುವರಿದಿದೆ.

‘‘ರಾಷ್ಟ್ರೀಯತೆಯ ತತ್ವಗಳ ಪ್ರಕಾರ, ವಿದೇಶಿ ಶಕ್ತಿಗಳಿಗೆ ಮಣಿಯದೆ ಹಾಗೂ ಅವುಗಳ ಬೆದರಿಕೆಗಳಿಗೆ ಜಗ್ಗದೆ ನಾನು ಕ್ರಮಗಳನ್ನು ತೆಗೆದುಕೊಂಡೆ. ಈಗ ವಿದೇಶಿ ಶಕ್ತಿಗಳು ಸವಾಲಾಗಿವೆ. ಹಿಂದಿನ ಸಾಮ್ರಾಜ್ಯಶಾಹಿಯ ನೆರಳು ನಮ್ಮ ದಾರಿಯಲ್ಲಿ ನಿಂತಿದೆ’’ ಎಂದು ಯಾವುದೇ ದೇಶವನ್ನು ಹೆಸರಿಸದೆ ಮೈತ್ರಿಪಾಲ ಹೇಳಿದರು.

ರವಿವಾರ ತನ್ನ ತವರು ಪಟ್ಟಣ ಪೊಲೊನ್ನರುವದಲ್ಲಿ ಸಮಾವೇಶವೊಂದನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಈ ಮಾತುಗಳನ್ನು ಹೇಳಿದರು ಎಂದು ‘ಡೇಲಿ ಮಿರರ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News