ಹಸಿದವರ ಇಲ್ಲವಾಗಿಸುವ ಗ್ಯಾಸ್‌ಚೇಂಬರ್ ಈ ಆಧಾರ್

Update: 2018-12-10 18:42 GMT

ಆಧಾರ್ ಕಾರ್ಡ್‌ನ ಕುರಿತಂತೆ ಸುಪ್ರೀಂಕೋರ್ಟ್‌ನ ತೀರ್ಪು ಬಡವರಿಗೆ, ಬಹುಜನರಿಗೆ ಪೂರಕವಾಗಿಲ್ಲ ಎನ್ನುವುದನ್ನು ಕಾಳೇಶ್ವರ ಸೊರೆನ್ ಎಂಬ ಬಡ ಆದಿವಾಸಿಯ ಸಾವು ಮತ್ತೊಮ್ಮೆ ದೇಶದ ಮುಂದೆ ಘೋಷಿಸಿದೆ. ಬಡವರ ಬದುಕನ್ನು ಆಧಾರ್ ಕಾರ್ಡ್ ನಿಯಂತ್ರಿಸತೊಡಗಿದೆ. ಸರಕಾರದ ಉಳಿದ ಸವಲತ್ತುಗಳು ಬಿಡಿ, ಬಡತನ ರೇಖೆಯ ಕೆಳಗಿರುವ ವ್ಯಕ್ತಿಯೊಬ್ಬ ಒಂದು ಕೆಜಿ ಅಕ್ಕಿಯನ್ನು ಪಡಿತರ ವ್ಯವಸ್ಥೆಯಿಂದ ಪಡೆಯಬೇಕಾದರೂ ಆಧಾರ್ ಇರಲೇಬೇಕು ಎನ್ನುವ ಕಾನೂನು ಪ್ರಜಾಸತ್ತಾತ್ಮಕ ದೇಶದೊಳಗಿನ ಕ್ರೌರ್ಯದ ಪರಮಾವಧಿಯಾಗಿದೆ. ಇದೊಂದು ರೀತಿಯಲ್ಲಿ ಬಡ ಆದಿವಾಸಿಗಳ ಸಾಮೂಹಿಕ ಹತ್ಯಾಕಾಂಡದ ಆರಂಭವೆಂದೇ ಹೇಳಬೇಕು. ಇತ್ತೀಚೆಗೆ ಜಾರ್ಖಂಡ್ ರಾಜ್ಯದ ದುಮ್ಕಾ ಜಿಲ್ಲೆಯ ಒಂದು ಗ್ರಾಮದ ಕಾಳೇಶ್ವರ ಸೊರೆನ್ ಎಂಬ 45 ವರ್ಷಗಳ ಆದಿವಾಸಿ ಮನುಷ್ಯ ಹಸಿವು ಮತ್ತು ಅಪೌಷ್ಟಿಕತೆಯ ಕಾರಣದಿಂದ ಮೃತಪಟ್ಟ. ಕಳೆದ ವರ್ಷ ಸಂತೋಷ್ ಕುಮಾರಿಯ ಮರಣಾನಂತರ ಇದು ಆ ರಾಜ್ಯದ ಹದಿನೇಳನೆಯ ಹಸಿವಿನ ಸಾವು. ಕಾಳೇಶ್ವರನಿಗೇನೂ ಹೇಳಿಕೊಳ್ಳುವಂತಹ ರೋಗವಿರಲಿಲ್ಲ! ಅವನ ಮಗ ಹೇಳುವ ಪ್ರಕಾರ ಸಾಯುವ ಎರಡು ದಿನ ಮುಂಚಿನಿಂದ ಆತ ಏನೂ ತಿಂದಿರಲಿಲ್ಲ.

  ಹಿಂದೆ ಇಟ್ಟಿಗೆ ಗೂಡೊಂದರಲ್ಲಿ ಕೆಲಸಮಾಡುತ್ತಿದ್ದ ಈತ ಗಾಯಾಳುವಾಗಿ ಕೆಲಸಬಿಟ್ಟಿದ್ದ. ಹಸಿವು ಮತ್ತು ನಿರ್ಗತಿ ಅವನನ್ನು ಶಿಕ್ಷಣದಿಂದ ದೂರವೇಇಟ್ಟಿತ್ತು. ಅವನ ಮಕ್ಕಳು ಕೆಲಸ ಹುಡುಕುತ್ತಾ ವಲಸೆ ಹೋದರು. ಅವರ್ಯಾರಿಗೂ ಅಂಗನವಾಡಿ ಅಥವಾ ಮಧ್ಯಾಹ್ನದ ಬಿಸಿ ಬಿಡಿ ತಣ್ಣಗಿನ ಊಟದ ಸೌಲಭ್ಯವೂ ಸಿಕ್ಕಿರಲಿಲ್ಲ. ಗ್ರಾಮದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಚಾಲ್ತಿಯಲ್ಲಿರಲಿಲ್ಲ. ಈತನ ಕುಟುಂಬಕ್ಕೆ ಉದ್ಯೋಗ ಚೀಟಿ ಸಿಕ್ಕಿರಲಿಲ್ಲ. ಬದುಕಿ ಉಳಿಯಲು ಅವರಿಗೆ ಯಾವುದೇ ಉದ್ಯೋಗಾವಕಾಶ ಇರಲಿಲ್ಲ!

 ಇಂತಹ ಪರಿಸ್ಥಿತಿಯಲ್ಲಿ ಉಣ್ಣಲು ಅತನಿಗೆ ಗತಿಯಿದ್ದದ್ದು ಅಂತ್ಯೋದಯ ಮೂಲಕ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಪಡಿತರ ಮಾತ್ರ. ಅದು ಅವನ ಕೊನೆಯ ದಾರಿಯಾಗಿತ್ತು. ಆದರೆ, ಅವನ ಪಡಿತರ 2016ರಲ್ಲಿ ನಿಂತುಹೋಯಿತು. ಯಾಕೆಂದರೆ ಆತನ ಆಧಾರ್ ನಂಬರನ್ನು ಪಡಿತರ ಚೀಟಿಗೆ ಜೋಡಿಸಿರಲಿಲ್ಲ!

 ಇನ್ನೆರಡು ಆಧಾರ್ ಜೋಡಣೆ ಆಧರಿತ ಹಸಿವಿನ ಸಾವುಗಳು ಅದೇ ಜಾರ್ಖಂಡ್‌ನಲ್ಲಿ 2016ರಲ್ಲಿಯೇ ಸಂಭವಿಸಿದ್ದವು. ರಾಜ್ಯ ಸರಕಾರವು 'ಕಾಗದ ರಹಿತ' ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಜಾರಿಗೊಳಿಸಿತು. ನಕಲಿ ಚೀಟಿಗಳನ್ನು ತಡೆಯುವುದು ಇದರ ಉದ್ದೇಶ. ಅದೇ ಹೊತ್ತಿನಲ್ಲೇ ಈ ಆಧಾರ್ ನಂಬರುಗಳು ಪಡಿತರ ಚೀಟಿಗಳಿಗೆ ಜೋಡಣೆಯಾಗಲು ಅರಂಭವಾದದ್ದು. ಪರಿಣಾಮವಾಗಿ, 'ಆಧಾರ್ ಆಧರಿತ ಉಳಿತಾಯ' ಎಂಬ ಹೆಸರಿನಲ್ಲಿ ಪಡಿತರ ಚೀಟಿಗಳು ರದ್ದಾದವು. ಗ್ರಾಮೀಣ ಭಾರತದ ಕಾಳೇಶ್ವರನಂತಹವರಿಗೆ, ಹಲವಾರು ಜನ ಕಲ್ಯಾಣ ಕಾರ್ಯಕ್ರಮಗಳಿಂದ ಹಿಂದೆಯೇ ವಂಚಿತರಾಗಿದ್ದ ತಳಸಮುದಾಯದ ಬಡವರಿಗಿದು ಕೊನೆಯ ಆಘಾತವಾಗಿತ್ತು. ಇದಕ್ಕೆಲ್ಲ ಕಾರಣವಾದದ್ದೆಂದರೆ 'ಸೀಡಿಂಗ್' ಎಂದು ಕರೆಯಲ್ಪಡುವ ಅಧಿಕೃತ ಪ್ರಕ್ರಿಯೆ. ಆಧಾರ್ ಲಿಂಕ್ ಆದ ತಕ್ಷಣ ನಕಲಿಗಳನ್ನು ತೆಗೆದುಹಾಕುವ ಪ್ರಕ್ರಿಯೆಯಿದು. ಅದರಲ್ಲಿ ಹಲವು ಸಮಸ್ಯೆಗಳಿದ್ದವು.ಆಧಾರ್ ಕಾರ್ಡಿಗೆ ನೀಡಿದ ಪ್ರತಿಯೊಂದು ಮಾಹಿತಿಯೂ ಉಳಿದ ದಾಖಲೆಗಳ ಜೊತೆ ತಾಳೆಯಾಗಬೇಕು. ನಿಮ್ಮ ಹೆಸರು, ತಂದೆ- ಗಂಡನ ಹೆಸರು, ವಯಸ್ಸು, ಹುಟ್ಟಿದ ದಿನಾಂಕ, ಸ್ಥಳ, ವಿಳಾಸ, ಡೋರ್ ನಂಬರ್.. ಇವುಗಳಲ್ಲಿ ಯಾವುದರಲ್ಲೊಂದು ತಾಳೆಯಾಗದಿದ್ದಲ್ಲಿ ನಿರ್ದಯ ಕಂಪ್ಯೂಟರ್ ನಿಮ್ಮನ್ನು ಅಳಿಸಿಬಿಡುತ್ತದೆ. ಈ ದೇಶದ ಹಳ್ಳಿಗಳ ಬಡ ನಿರಕ್ಷರಕುಕ್ಷಿ ಜನರಲ್ಲಿ ಎಷ್ಟು ಜನರಿಗೆ ಇವೆಲ್ಲವೂ ಖಚಿತವಾಗಿ ಗೊತ್ತಿರುತ್ತವೆ?! ಕಾಳೇಶ್ವರನಿಗೆ ಆದದ್ದು ಹೀಗೆಯೇ! ನಕಲಿ ಚೀಟಿಯವರು ಬದುಕಿಕೊಳ್ಳುತ್ತಾರೆ. ಅಸಲಿ ಬಡವರು ಸಾಯುತ್ತಾರೆ!

ಜಾರ್ಖಂಡ್ ಸರಕಾರದ ಅಧಿಕೃತ ಅಂಕಿಅಂಶಗಳ ಪ್ರಕಾರವೇ ಸುಮಾರು 2.3 ಕೋಟಿ ಪಡಿತರ ಚೀಟಿಗಳಲ್ಲಿ ಕೇವಲ 1.7 ಕೋಟಿಯನ್ನು ಮಾತ್ರ 'ಸೀಡ್' ಮಾಡಲಾಗಿದೆ. ಉಳಿದವರೇನಾದರು!? ಜಾರ್ಖಂಡ್‌ನಲ್ಲಿ ನಡೆದ ದುರಂತ ದೇಶದ ಯಾವ ಮೂಲೆಯಲ್ಲಾದರೂ ಸಂಭವಿಸಬಹುದು. ಯಾಕೆಂದರೆ ಹಸಿವಿನಿಂದ ಸಾವು ಸಂಭವಿಸುತ್ತದೆ ಎನ್ನುವ ಕಠೋರ ವಾಸ್ತವವನ್ನು ನಮ್ಮ ಮಾಧ್ಯಮಗಳು ಇನ್ನೂ ಒಪ್ಪಿಕೊಂಡಿಲ್ಲ. ಇಂದು ನೀವು ನಕಲಿ ಆಧಾರ್ ಕಾರ್ಡ್‌ಗಳನ್ನು ಆ ಮೂಲಕ ನಕಲಿ ಪಡಿತರವನ್ನು ಸೃಷ್ಟಿಸುವುದು ಸುಲಭ. ಆದರೆ ಅರ್ಹ ಫಲಾನುಭವಿಯೊಬ್ಬ ಆಧಾರ್ ಕಾರ್ಡ್ ಇಲ್ಲದೇ ಆಹಾರವನ್ನು ಪಡೆದುಕೊಳ್ಳುವುದು ಈ ನೆಲದಲ್ಲಿ ಅಸಾಧ್ಯ. ಹಸಿದವರ ಆಹಾರವನ್ನು ನಕಲಿ ಕಾಳ ಸಂತೆಕೋರರು ಕಬಳಿಸುತ್ತಿರುವುದು ಇನ್ನೊಂದು ಕಠೋರ ವಾಸ್ತವ. ಕಾಳೇಶ್ವರ ಬಡವ ಎನ್ನುವುದನ್ನು ಸರಕಾರ ಗುರುತಿಸಿದೆ. ಒಂದು ವೇಳೆ ಅವನು ಪಡಿತರ ಚೀಟಿ ಪಡೆಯಲು ಆಧಾರ್ ಅನಿವಾರ್ಯವಾಗಿದ್ದರೆ ಅದನ್ನು ಸುಲಭ ದಾರಿಯಲ್ಲಿ ಒದಗಿಸಿಕೊಡುವುದು ಅಧಿಕಾರಿಗಳ ಕರ್ತವ್ಯ.

ಆಧಾರ್ ಇಲ್ಲ ಎನ್ನುವ ಕಾರಣಕ್ಕಾಗಿ ಬಡವರನ್ನು ಪಡಿತರ ಚೀಟಿಯಿಂದ ಕಿತ್ತು ಹಾಕಲು ಅಧಿಕಾರಿಗಳಿಗೆ ಇರುವ ಉತ್ಸಾಹ, ಅವರಿಗೆ ಸುಲಭ ದಾರಿಯಲ್ಲಿ ಆಧಾರ್ ಕಾರ್ಡ್ ಮಾಡಿಸಿಕೊಟ್ಟು ಪಡಿತರ ಚೀಟಿಯಲ್ಲಿ ಉಳಿಯುವಂತೆ ಮಾಡುವಲ್ಲಿ ಇಲ್ಲ. ಒಂದು ರೀತಿಯಲ್ಲಿ ಬಡವರನ್ನು, ಆದಿವಾಸಿಗಳನ್ನು ನಿರ್ನಾಮ ಮಾಡಲು ಮೋದಿ ಸರಕಾರ ಹುಡುಕಿರುವ ಹೊಸ ಗ್ಯಾಸ್ ಚೇಂಬರ್ ಆಗಿದೆ ಈ ಆಧಾರ್. ಬುಲೆಟ್ ಟ್ರೈನ್‌ಗಳು, ವಿಶ್ವದ ಅತಿ ದೊಡ್ಡ ಪಾರ್ಕ್‌ಗಳು, ಅತಿ ದೊಡ್ಡ ಪ್ರತಿಮೆಗಳ ಮೂಲಕ ಭಾರತದ ವರ್ಚಸ್ಸನ್ನು ವಿಶ್ವದ ಮುಂದೆ ಹೆಚ್ಚಿಸಲು ನರೇಂದ್ರ ಮೋದಿ ಪ್ರಯತ್ನಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆದಿವಾಸಿಗಳು, ಬಡವರು ಮೋದಿಗೆ ಒಂದು ತೊಡಕಾಗಿದ್ದಾರೆ. ಆದುದರಿಂದ ವಿವಿಧ ಗುರುತು ಚೀಟಿಗಳನ್ನು ಅನಿವಾರ್ಯಗೊಳಿಸುತ್ತಾ ಬಡವರನ್ನು ಹಸಿವಿನ ಗ್ಯಾಸ್‌ಚೇಂಬರ್‌ಗೆ ಹಾಕಿ ಇಲ್ಲವಾಗಿಸುವ ಮೂಲಕ ಭಾರತದ ಬಡತನವನ್ನು ಅಳಿಸಿ ಹಾಕುವ ಯೋಜನೆಯನ್ನು ಸರಕಾರ ಹಾಕಿಕೊಂಡಂತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News