ಸೆಲ್ಫಿಗೆ ಅಡ್ಡಿಪಡಿಸಿದ ಆರೋಪ: ಯುವತಿ ಸೇರಿ ತಂಡದಿಂದ ಬಾಲಕನಿಗೆ ಥಳಿತ

Update: 2018-12-11 04:09 GMT

ಬೆಂಗಳೂರು, ಡಿ. 11: ಇಲ್ಲಿನ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಅಕ್ಕಯ್ಯಮ್ಮ ಬೆಟ್ಟದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಡ್ಡಿಪಡಿಸಿದ ಆರೋಪದಲ್ಲಿ ಯುವತಿ ಸೇರಿದಂತೆ ಆರು ಮಂದಿಯ ತಂಡ ಬಾಲಕನೊಬ್ಬನನ್ನು ಅಮಾನುಷವಾಗಿ ಥಳಿಸಿದ ಘಟನೆ ಬೆಳಕಿಗೆ ಬಂದಿದೆ.

ಇಬ್ಬರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾಗ ಜಬ್ಬಿ ಖಾನ್ (15) ಎಂಬ ಬಾಲಕ ಆಕಸ್ಮಿಕವಾಗಿ ಹಾದುಹೋಗುವಾಗ ಫೋಟೋದಲ್ಲಿ ಸೆರೆಯಾದ. ಇದರಿಂದ ಕೋಪಗೊಂಡ ಈ ಇಬ್ಬರು ಹಾಗೂ ತಂಡದ ಇತರ ನಾಲ್ಕು ಮಂದಿ ಬಾಲಕನಿಗೆ ಹಲ್ಲೆ ಮಾಡಿದರು ಎಂದು ಚಿಕ್ಕಜಾಲ ಪೊಲೀಸರು ಹೇಳಿದ್ದಾರೆ.

ಜಬ್ಬಿ ಖಾನ್ ಹಾಗೂ ಆತನ ತಮ್ಮ ಈ ಪಿಕ್‌ನಿಕ್ ತಾಣಕ್ಕೆ ಬಂದಿದ್ದರು. ಅಣ್ಣನನ್ನು ಗುಂಪು ಥಳಿಸುತ್ತಿದ್ದುದನ್ನು ನೋಡಿದ ಬಾಲಕ ತನ್ನ ತಂದೆ ಮುಬಾರಕ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದ. ಹಲ್ಲೆಯಿಂದಾಗಿ ಬಾಲಕನ ಎರಡು ಹಲ್ಲುಗಳು ಉದುರಿದ್ದನ್ನು ನೋಡಿದ ತಂದೆ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸೇರಿಸಿದರು.
"ಐದು ಮಂದಿ ಯುವಕರು ಹಾಗೂ ಒಬ್ಬ ಯುವತಿ ಅಣ್ಣನನ್ನು ಥಳಿಸುತ್ತಿದ್ದು, ಮುಖಕ್ಕೆ ಗಾಯಗಳಾಗಿವೆ ಎಂದು ಚಿಕ್ಕ ಮಗ ದೂರವಾಣಿ ಮಾಡಿ ತಿಳಿಸಿದ. ಗಾಯಾಳು ಬಾಲಕ ಚಿಕಿತ್ಸೆ ಪಡೆಯುತ್ತಿದ್ದು, ತಪ್ಪಿತಸ್ಥರನ್ನು ತಕ್ಷಣ ಬಂಧಿಸಬೇಕು" ಎಂದು ಮುಬಾರಕ್ ಹೇಳಿದ್ದಾರೆ.

ಹಲ್ಲೆ ಮಾಡಿದವರನ್ನು ಪತ್ತೆ ಹಚ್ಚಲಾಗಿದ್ದು, ಪೋಷಕರೊಂದಿಗೆ ಬರುವಂತೆ ಸೂಚಿಸಲಾಗಿದೆ. ಈ ಬಗ್ಗೆ ವಿಚಾರಣೆ ನಡೆಸಲಾಗುವುದು. ಗುಂಪು ಬಾಲಕನನ್ನು ಥಳಿಸಿದ್ದು ಮಾತ್ರವಲ್ಲದೇ ಮೊಬೈಲ್ ಕೂಡಾ ಕಿತ್ತುಕೊಂಡಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News