ವಿಧಾನ ಪರಿಷತ್ ಸಭಾಪತಿಯಾಗಿ ಪ್ರತಾಪ್ ಚಂದ್ರ ಶೆಟ್ಟಿ ಆಯ್ಕೆ ಬಹುತೇಕ ಖಚಿತ

Update: 2018-12-11 11:08 GMT

ಬೆಳಗಾವಿ(ಸುವರ್ಣಸೌಧ), ಡಿ.11: ಮೇಲ್ಮನೆ ಹಿರಿಯ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ ಅವರು ವಿಧಾನ ಪರಿಷತ್‍ನ ಸಭಾಪತಿ ಸ್ಥಾನ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು, ಅವರು ಅವಿರೋಧ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಮಂಗಳವಾರ ಮಧ್ಯಾಹ್ನ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಝಮೀರ್ ಅಹ್ಮದ್ ಖಾನ್,  ಮೇಲ್ಮನೆ ಸದಸ್ಯರಾದ ರವಿ, ಐವನ್ ಡಿಸೋಜಾ ಸೇರಿದಂತೆ ಪ್ರಮುಖರೊಂದಿಗೆ ಆಗಮಿಸಿ, ವಿಧಾನ ಪರಿಷತ್ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮಿ ಅವರಿಗೆ ಸಭಾಪತಿ ಸ್ಥಾನಕ್ಕೆ ಚುನಾವಣೆ ಪ್ರಸ್ತಾವನೆ ಸಲ್ಲಿಸಿದರು.

ಕೊನೆ ಕ್ಷಣದವರೆಗೂ ಯಾರೂ ನಾಮಪತ್ರ ಸಲ್ಲಿಸದೆ ಇರುವುದರಿಂದ ಇವರ ಆಯ್ಕೆ ಬಹುತೇಕ ಖಚಿತಗೊಂಡಿದೆ ಎನ್ನಲಾಗಿದೆ. ಇನ್ನೂ, ಇವರ ಅಧಿಕಾರಾವಧಿ 2022ರವರೆಗೆ ಮುಂದುವರೆಯಲಿದೆ.

ಕಾಂಗ್ರೆಸ್ ಬಹುಮತ: ಮೇಲ್ಮನೆಯಲ್ಲಿ ಕಾಂಗ್ರೆಸ್ ಬಹುಮತ ಹೊಂದಿದೆ. ಚುನಾವಣೆ ನಡೆದರೆ ಕಾಂಗ್ರೆಸ್‍ಗೆ ಸಭಾಪತಿ ಸ್ಥಾನ, ಉಪಸಭಾಪತಿ, ಸಚೇತಕ ಸ್ಥಾನ ದೊರೆಯಲಿದೆ. ಮೈತ್ರಿ ಆಡಳಿತವಿರುವುದರಿಂದ ಸಭಾಪತಿ ಸ್ಥಾನ ಪಡೆದು ಉಳಿದ ಸ್ಥಾನಗಳನ್ನು ಹಂಚಿಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇನ್ನೂ, ಸಭಾಪತಿ ಸ್ಥಾನದ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದ ಬಸವರಾಜ ಹೊರಟ್ಟಿ, ಎಸ್.ಆರ್.ಪಾಟೀಲ್ ಅವರಿಗೆ ನಿರಾಸೆಯಾಗಿದೆ.

'ಹಿರಿತನ ಗಮನಿಸಿ ನನಗೆ ಸ್ಥಾನ'

ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಚಂದ್ರ ಶೆಟ್ಟಿ, ನನ್ನ ಹಿರಿತನವನ್ನು ಗಮನಿಸಿ ನಮ್ಮ ಪಕ್ಷ ನನಗೆ ಅವಕಾಶ ಕೊಟ್ಟಿದೆ. ನಾಲ್ಕು ಬಾರಿ ಶಾಸಕನಾಗಿ, ಮೂರು ಬಾರಿ ವಿಧಾನಪರಿಷತ್ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ಸಭಾಪತಿ ಸ್ಥಾನ ನಿರೀಕ್ಷಿಸಿರಲಿಲ್ಲ. ನನ್ನನ್ನು ಆಯ್ಕೆ ಮಾಡಿದ ಪಕ್ಷದ ಎಲ್ಲಾ ಮುಖಂಡರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News