ಕ್ಯಾಬಿನ್‌ನಲ್ಲಿ ಹೊಗೆ: ತುರ್ತು ಭೂಸ್ಪರ್ಶ ಮಾಡಿದ ಇಂಡಿಗೋ ವಿಮಾನ

Update: 2018-12-11 15:02 GMT

ಕೋಲ್ಕತ್ತಾ, ಡಿ. 11: ಕ್ಯಾಬಿನ್ ಒಳಗಡೆ ಹೊಗೆ ಬರುತ್ತಿರುವುದನ್ನು ಗಮನಿಸಿ ಮಂಗಳವಾರ ಇಂಡಿಗೊ ವಿಮಾನವನ್ನು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ಎಲ್ಲ ಪ್ರಯಾಣಿಕರನ್ನು ವಿಮಾನದಿಂದ ತೆರವುಗೊಳಿಸಲಾಯಿತು ಎಂದು ವಿಮಾನ ಯಾನ ಸಂಸ್ಥೆ ತಿಳಿಸಿದೆ.

ಕ್ಯಾಬಿನ್‌ನಲ್ಲಿ ಹೊಗೆ ಕಂಡು ಬಂದ ಹಿನ್ನೆಲೆಯಲ್ಲಿ ಡಿಸೆಂಬರ್ 10ರಂದು ಜೈಪುರ-ಕೋಲ್ಕತ್ತಾ ನಡುವೆ ಸಂಚರಿಸುತ್ತಿದ್ದ ವಿಮಾನ 6ಇ-237ನ್ನು ತುರ್ತು ಭೂಸ್ಪರ್ಶ ಮಾಡಿತು. ಎಲ್ಲ ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ. ವಿಮಾನದಲ್ಲಿ ಯಾವುದೇ ದೋಷ ಕಂಡು ಬಂದ ಬಗ್ಗೆ ಈ ಹಿಂದೆ ವರದಿಯಾಗಿರಲಿಲ್ಲ ಎಂದು ವಿಮಾನ ಯಾನ ಸಂಸ್ಥೆಯ ಹೇಳಿಕೆ ತಿಳಿಸಿದೆ. ವಿಮಾನದಲ್ಲಿ ಹೊಗೆ ಕಾಣಿಸಿಕೊಂಡ ಸಂದರ್ಭ ವಿಮಾನ ಕೋಲ್ಕೊತ್ತಾದಿಂದ 45 ಮೈಲುಗಳಷ್ಟು ದೂರದಲ್ಲಿತ್ತು. ಈ ನಡುವೆ ಪ್ರಯಾಣಿಕರ ಸುರಕ್ಷೆ ಅಪಾಯದಲ್ಲಿದ್ದುದರಿಂದ ಪೈಲೆಟ್ ‘ಮೇ ಡೇ’ (ಸಹಾಯ ನೀಡಿ) ಜಾರಿಗೊಳಿಸಿದರು ಹಾಗೂ ಕೋಲ್ಕೊತ್ತಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶಕ್ಕೆ ಕೋರಿದರು.

ಘಟನೆಯನ್ನು ಇಂಡಿಗೊ ದೃಢಪಡಿಸಿದೆ. ಆದರೆ, ಈ ಹಿಂದೆ ವಿಮಾನ ಯಾವುದೇ ತಾಂತ್ರಿಕ ಸಮಸ್ಯೆಯನ್ನು ಎದುರಿಸಿಲ್ಲ ಎಂದು ಹೇಳಿದೆ. ಈ ಘಟನೆ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ನಾಗರಿಕ ವಿಮಾನ ಯಾನ ಸಚಿವಾಲಯದ ಅಡಿಯಲ್ಲಿ ಬರುವ ವಿಮಾನ ಅಪಘಾತ ತನಿಖಾ ಮಂಡಳಿ (ಎಎಐಬಿ) ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News