ದೇಶದಲ್ಲಿ ಕಾಂಗ್ರೆಸ್ ವಾತಾವರಣ ನಿರ್ಮಾಣ: ಕೆಪಿಸಿಸಿ ರಾಜ್ಯಾಧ್ಯಕ್ಷ ದಿ.ಗುಂಡೂರಾವ್

Update: 2018-12-11 15:03 GMT

ಬೆಳಗಾವಿ, ಡಿ.11: ಪಂಚರಾಜ್ಯಗಳ ಚುನಾವಣಾ ಫಲಿತಾಂಶದಿಂದ ಕಾಂಗ್ರೆಸ್‍ಗೆ ಶಕ್ತಿ ಬಂದಿದ್ದು, ಇದೇ ಹುಮ್ಮಸ್ಸಿನಿಂದ ಮುಂದಿನ ಲೋಕಸಭಾ ಚುನಾವಣೆಯನ್ನು ಎದುರಿಸಲಿದ್ದೇವೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಸ್ತಾನ, ಛತ್ತೀಸ್‍ಗಡ ಹಾಗೂ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೆ ಜನತೆ ಮತ ಹಾಕಿದ್ದಾರೆ. ಒಟ್ಟಾರೆ ದೇಶದಲ್ಲಿ ಕಾಂಗ್ರೆಸ್ ವಾತಾವರಣ ನಿರ್ಮಾಣವಾಗಿದ್ದು, ಇದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ಮುನ್ಸೂಚನೆ ಎಂದು ಹರ್ಷ ವ್ಯಕ್ತಪಡಿಸಿದರು.

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಪಂಚ ರಾಜ್ಯಗಳ ಚುನಾವಣಾ ಫಲಿತಾಂಶವು ಮುಂದಿನ ಲೋಕಸಭಾ ಚುನಾವಣೆಯ ಸ್ಪಷ್ಟ ದಿಕ್ಸೂಚಿಯಾಗಿದೆ. ಜನತೆ ಕಾಂಗ್ರೆಸ್ ಪರ ಇರುವುದು, ಕೈ ನಾಯಕರಲ್ಲಿ ಹಾಗೂ ಕಾರ್ಯಕರ್ತರಲ್ಲಿ ಮತ್ತಷ್ಟು ಆತ್ಮವಿಶ್ವಾಸ ತುಂಬಲು ಕಾರಣವಾಗಿದೆ ಎಂದು ತಿಳಿಸಿದರು.

ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ಪರ ಗಾಳಿ ಬೀಸುತ್ತಿದೆ. ಪ್ರಧಾನಿ ಹಾಗೂ ರಾಹುಲ್‍ಗಾಂಧಿ ಅವರ ಅಭಿವೃದ್ಧಿ ಪರ ನಿಲುವಿಗೆ ಜನತೆ ಮತ ನೀಡಿದ್ದಾರೆ. ಬಿಜೆಪಿ ನಾಯಕರು ಅಪರೇಷನ್ ಕಮಲ ಮಾಡಲು ಹೋಗಿ ಜನರಿಂದ ಅಪರೇಷನ್‍ಗೆ ತುತ್ತಾಗುವಂತಾಗಿದೆ ಎಂದು ಲೇವಡಿ ಮಾಡಿದರು.

ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇ ಗೌಡ ಮಾತನಾಡಿ, ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್‍ ಗಾಂಧಿ ಬಿಜೆಪಿ ನಾಯಕರ ವ್ಯಂಗ್ಯಭರಿತ ಮಾತುಗಳಿಗೆ ಧೃತಿಗೆಡದೆ ಜನತೆಯಲ್ಲಿ ಕಾಂಗ್ರೆಸ್ ಕುರಿತು ವಿಶ್ವಾಸ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಂಚ ರಾಜ್ಯಗಳ ಚುನವಣಾ ಫಲಿತಾಂಶವನ್ನು ಗಮನಿಸಿದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್‍ಗೆ ಉತ್ತಮ ಫಲಿತಾಂಶ ಬರಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News