ಲೈಂಗಿಕ ಕಿರುಕುಳ ಆರೋಪ: ನಟ ಅರ್ಜುನ್ ಸರ್ಜಾರನ್ನು ಬಂಧಿಸದಂತೆ ಹೈಕೋರ್ಟ್ ಆದೇಶ

Update: 2018-12-11 15:48 GMT

ಬೆಂಗಳೂರು, ಡಿ.11: ಲೈಂಗಿಕ ಕಿರುಕುಳ ಆರೋಪದಲ್ಲಿ ನಟಿ ಶೃತಿ ಹರಿಹರನ್ ದಾಖಲಿಸಿರುವ ದೂರಿಗೆ ಸಂಬಂಧಿಸಿದಂತೆ ನಟ ಅರ್ಜುನ್ ಸರ್ಜಾ ಅವರನ್ನು ಡಿಸೆಂಬರ್ 11ರವರೆಗೆ ಬಂಧಿಸದಂತೆ ಈ ಹಿಂದೆ ನೀಡಿದ್ದ ಆದೇಶವನ್ನು ಹೈಕೋರ್ಟ್ ಪುನಃ ವಿಸ್ತರಿಸಿದೆ.

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ಶೃತಿ ಹರಿಹರನ್ ದಾಖಲಿಸಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಅರ್ಜುನ್ ಸರ್ಜಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾ. ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಈ ವೇಳೆ, ಅರ್ಜಿದಾರರ ಪರ ಹಾಗೂ ಸರಕಾರದ ಪರ ವಕೀಲರು ಕಾಲಾವಕಾಶ ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಅರ್ಜಿಯ ಮುಂದಿನ ವಿಚಾರಣೆವರೆಗೆ ಅರ್ಜುನ್ ಸರ್ಜಾ ಅವರನ್ನು ಬಂಧಿಸದಂತೆ ಈ ಹಿಂದೆ ನೀಡಿದ್ದ ಆದೇಶವನ್ನು ವಿಸ್ತರಿಸಿ, ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ನ ಕ್ರಿಸ್‌ಮಸ್ ರಜೆ ನಂತರಕ್ಕೆ ಮುಂದೂಡಿತು.

ಪ್ರಕರಣವೇನು?: ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ನಟಿ ಶೃತಿ ಹರಿಹರನ್, ಈ ಸಂಬಂಧ ಅ.27ರಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು.

ಶೃತಿ ಹರಿಹರನ್ ತಮ್ಮ ವಿರುದ್ಧ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಆರೋಪಗಳನ್ನು ಸಾಬೀತುಪಡಿಸಲು ಸೂಕ್ತ ಸಾಕ್ಷಾಧಾರಗಳೂ ಇಲ್ಲ. ದುರುದ್ದೇಶದಿಂದ ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿದೆ. ಹೀಗಾಗಿ ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸಬೇಕೆಂದು ಕೋರಿ ಅರ್ಜುನ್ ಸರ್ಜಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News