ಸಂಶೋಧನಾ ವರದಿಗಳನ್ನು ಕನ್ನಡದಲ್ಲೇ ತಯಾರಿಸಿ: ಪ್ರೊ.ಎಸ್.ಜಿ.ಸಿದ್ಧರಾಮಯ್ಯ

Update: 2018-12-11 16:30 GMT

ಬೆಂಗಳೂರು, ಡಿ.11: ರಾಜ್ಯಾಡಳಿತಕ್ಕೆ ಒಳಪಟ್ಟ ಯಾವುದೇ ಆಯೋಗ ಅಥವಾ ಸಂಸ್ಥೆಗಳು ತಾವು ತಯಾರಿಸುವ ವಿಷಯಾಧಾರಿತ ಅಧ್ಯಯನ ಹಾಗೂ ಸಂಶೋಧನಾ ವರದಿಗಳನ್ನು ಮೊದಲು ಕನ್ನಡದಲ್ಲಿ ತಯಾರಿಸಿ ತದನಂತರ ಅಗತ್ಯವಿದ್ದಲ್ಲಿ ಅನ್ಯಭಾಷೆಗೆ ತರ್ಜುಮೆ ಮಾಡುವುದು ಕಡ್ಡಾಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಸೂಚಿಸಿದ್ದಾರೆ.

ಮಂಗಳವಾರ ನಗರದ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಗೆ ಭೇಟಿ ನೀಡಿ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ರಾಜ್ಯದೊಳಗಿನ ಪತ್ರ, ಕಡತ ಹಾಗೂ ತಂತ್ರಜ್ಞಾನಕ್ಕೆ ಸಂಬಂಧಿಸಿದ ಆಡಳಿತ ವ್ಯವಹಾರಗಳಲ್ಲಿ ಕಡ್ಡಾಯವಾಗಿ ಶೇ.100ರಷ್ಟು ಕನ್ನಡವನ್ನು ಅನುಷ್ಠಾನಗೊಳಿಸಿ ಮೂರು ತಿಂಗಳಿಗೊಮ್ಮೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಗತಿಯ ವರದಿಯನ್ನು ಸಲ್ಲಿಸುವಂತೆ ಸೂಚನೆ ನೀಡಿದರು.

ಎಂಪ್ರಿ ಸಂಸ್ಥೆಯು ನೀಡುವ ವರದಿ ರೂಪದ ಸಲಹೆಯನ್ನಾಧರಿಸಿ ಪರಿಸರ, ಅರಣ್ಯ, ಜಲಸಂಪನ್ಮೂಲ, ಕೆರೆ ಅಭಿವೃದ್ಧಿ ಪ್ರಾಧಿಕಾರ, ಜಲಮಂಡಳಿ, ಶಿಕ್ಷಣ ಇಲಾಖೆ ಹೀಗೆ ಹಲವು ಇಲಾಖೆಗಳು ಕಾರ್ಯನಿರ್ವಹಿಸಬೇಕಿದ್ದು, ಕೆರೆಗಳ ಉಳಿವು, ಶುದ್ಧ ಕುಡಿಯುವ ನೀರು, ಪರಿಸರ ಸಂರಕ್ಷಣೆಯಷ್ಟೇ ಅಲ್ಲದೆ ಶಾಲಾ ಕಾಲೇಜು ಮಕ್ಕಳಿಗೆ ಪರಿಸರ ಅಧ್ಯಯನಕ್ಕೆ ಸಂಬಂಧಿಸಿದಂತೆ ಕಾರ್ಯಯೋಜನೆಗಳನ್ನು ಹಮ್ಮಿಕೊಂಡಿರುವ ಸಂಸ್ಥೆಯು ನೀಡುವ ವಸ್ತುನಿಷ್ಠ ವರದಿಯಿಂದಲೇ ನಗರ ಪ್ರದೇಶಗಳು ಸುಸ್ಥಿತಿಯಲ್ಲಿರಲು ಕಾರಣ ಎಂದು ತಿಳಿಸಿದರು.

ಸಂಸ್ಥೆಯು ಅಧ್ಯಯನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚಿನ ಬದ್ಧತೆ ತೋರಿ ಇಲ್ಲಿನ ಜನರ ಬದುಕನ್ನು ಸುಧಾರಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕೆಂದು ತಿಳಿಸಿದರು. ಅಂತೆಯೇ ಪದವಿ ಕಾಲೇಜುಗಳಲ್ಲಿ ಪರಿಸರ ಅಧ್ಯಯನವನ್ನು ಒಂದು ವಿಷಯವನ್ನಾಗಿ ಬೋಧಿಸಿ, ಪರೀಕ್ಷೆ ನಡೆಸುತ್ತಿದ್ದು, ಅದನ್ನು ಅಂಕಪಟ್ಟಿಗೆ ಸೇರಿಸಿ ವಿದ್ಯಾರ್ಥಿಯ ಫಲಿತಾಂಶಕ್ಕೆ ಅಳವಡಿಸುವ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಂಸ್ಥೆಯ ಮಹಾನಿರ್ದೇಶಕರಿಗೆ ಸೂಚಿಸಿದರು.

ಸಂಶೋಧನಾ ಮತ್ತು ಅಧ್ಯಯನಕ್ಕೆ ಸಂಬಂಧಿಸಿದಂತೆ ಪ್ರಕಟವಾಗುವ ಪುಸ್ತಕಗಳು ಪರಿಸರದ ಬಗ್ಗೆ ಸಾಮಾನ್ಯ ತಿಳುವಳಿಕೆಯನ್ನು ನೀಡುವ ರೀತಿಯಲ್ಲಿ ಕಿರು ಹೊತ್ತಿಗೆಗಳನ್ನು ಪ್ರಕಟಿಸಿ ಶಾಲೆಗಳಿಗೆ ನೀಡಿದಲ್ಲಿ ಮಕ್ಕಳಲ್ಲಿ ಹೆಚ್ಚು ಪರಿಸರ ಜಾಗೃತಿ, ಪ್ರಾಣಿ ಪ್ರೀತಿ ಮೂಡುತ್ತದೆ. ಆದ್ದರಿಂದ ಪ್ರಕೃತಿ ಮತ್ತು ಸಂಸ್ಕೃತಿ ಎರಡೂ ಮಿಳಿತಗೊಂಡ ರೀತಿಯಲ್ಲಿ ಸಾಗಬೇಕು ಎಂದು ಹೇಳಿದರು. ಸಂಸ್ಥೆಯು ಕೇವಲ ಮಾಹಿತಿ ಸಲಹೆ ನೀಡುವುದಕ್ಕೆ ಸೀಮಿತವಾಗದೆ ನೀಡುವ ಸಲಹೆ ಸೂಚನೆಗಳು ಅನುಷ್ಠಾನಕ್ಕೆ ಬರುವಂತೆ ಇಲ್ಲಿನ ಜನರಿಗೆ ಉತ್ತರದಾಯಿತ್ವವಾಗಿ ಕಾರ್ಯನಿರ್ವಹಿಸಬೇಕೆಂದು ಹೇಳಿದರು. 2002ರಲ್ಲಿ ಪ್ರಾರಂಭವಾದ ಸಂಸ್ಥೆಯು ಆಡಳಿತ ವ್ಯವಹಾರಗಳು ಮತ್ತು ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಹುತೇಕ ಕನ್ನಡವನ್ನು ಜಾರಿಗೊಳಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಭೆಯಲ್ಲಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ಮಹಾ ನಿರ್ದೇಶನಾಲಯದ ರೀತು ಕಕ್ಕರ್, ನಿರ್ದೇಶಕ ಡಾ.ವಿನಯ್ ಕುಮಾರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸದಸ್ಯ ಗಿರೀಶ್ ಪಟೇಲ್, ಅಧ್ಯಕ್ಷರ ಆಪ್ತ ಕಾರ್ಯದರ್ಶಿಗಳಾದ ಡಾ.ವೀರಶೆಟ್ಟಿ ಮತ್ತು ಸಂಬಂಧಪಟ್ಟ ಸಂಸ್ಥೆಯ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News