ಫ್ರಾನ್ಸ್ ಕ್ರಿಸ್ಮಸ್ ಮಾರ್ಕೆಟ್‌ನಲ್ಲಿ ಗುಂಡಿನ ದಾಳಿ: ನಾಲ್ವರು ಬಲಿ

Update: 2018-12-12 04:11 GMT

ಪ್ಯಾರೀಸ್, ಡಿ. 12: ಫ್ರಾನ್ಸ್‌ನ ಗಡಿನಗರವಾದ ಸ್ಟರಸ್‌ಬರ್ಗ್ ಕ್ರಿಸ್ಮಸ್ ಮಾರ್ಕೆಟ್‌ನಲ್ಲಿ ಮಂಗಳವಾರ ರಾತ್ರಿ ಆಗಂತುಕನೊಬ್ಬ ದಿಢೀರ್ ಗುಂಡಿನ ದಾಳಿ ನಡೆಸಿ ನಾಲ್ವರನ್ನು ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ ಇತರ 11 ಮಂದಿ ಗಾಯಗೊಂಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ದಾಳಿಯ ಉದ್ದೇಶ ತಕ್ಷಣಕ್ಕೆ ಸ್ಪಷ್ಟವಾಗಿಲ್ಲ; ಆದರೆ 2015ರಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರಿಂದ ಪ್ರೇರಿತವಾಗಿ ಸರಣಿ ದಾಳಿ ನಡೆಯುತ್ತಿರುವ ಹಿನ್ನೆಲೆ ಯಲ್ಲಿ ಫ್ರಾನ್ಸ್‌ನಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಭಯೋತ್ಪಾದಕ ತಡೆ ವಿಭಾಗ ತನಿಖೆ ಕೈಗೆತ್ತಿಕೊಂಡಿದೆ.

ಘಟನೆ ನಡೆದ ಎರಡು ಗಂಟೆಗಳಲ್ಲೇ ಪೊಲೀಸರು ಶಂಕಿತ ಆರೋಪಿಯನ್ನು ಬಂಧಿಸಿವೆ ಎಂದು ಉನ್ನತ ಮೂಲಗಳು ಹೇಳಿವೆ. ದಾಳಿಕೋರ ಮಳಿಗೆಯೊಂದರಲ್ಲಿ ಅವಿತಿದ್ದ ಎಂದು ಮಾಧ್ಯಮಗಳು ವರದಿ ಮಾಡಿವೆ. ದಾಳಿಕೋರನ ಬಗ್ಗೆ ಭದ್ರತಾ ಪಡೆಗಳಿಗೆ ಮಾಹಿತಿ ಇದೆ. ಗುಪ್ತಚರ ಸೇವೆಗಳ ವಿಭಾಗದ ನಿಗಾ ವಹಿಸಬೇಕಾದ ವ್ಯಕ್ತಿಗಳ ಪಟ್ಟಿಯಲ್ಲಿ ಈತ ಇದ್ದ ಎಂದು ಒಳಾಡಳಿತ ಸಚಿವ ಕ್ರಿಸ್ತೋಪ್ ಕ್ಯಾಸ್ಟನರ್ ಹೇಳಿದ್ದಾರೆ.

ಪೊಲೀಸ್ ಕಾರ್ಯಾಚರಣೆ ಹಿನ್ನೆಲೆಯಲ್ಲಿ ನ್ಯುಡಾರ್ಫ್ ಪ್ರದೇಶ ಮತ್ತು ಎಟೊಯ್ಲೆ ಪಾರ್ಕ್ ಪ್ರದೇಶದ ಜನರನ್ನು ಮನೆಗಳಿಂದ ಹೊರಬರದಂತೆ ಸೂಚಿಸಲಾಗಿತ್ತು. ರಾಯ್ಟರ್ ವರದಿಗಾರ ಸೇರಿದಂತೆ 30-40 ಮಂದಿಯನ್ನು ಸೂಪರ್‌ಮಾರ್ಕೆಟ್‌ನ ನೆಲಮಾಳಿಗೆಯಲ್ಲೇ ಭದ್ರತೆ ದೃಷ್ಟಿಯಿಂದ ಇರಿಸಲಾಗಿದ್ದು, ಎಲ್ಲ ದೀಪಗಳನ್ನು ಆರಿಸಿ ಅವರ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗಿದೆ. ಸ್ಟ್ರಸ್‌ಬರ್ಗ್‌ನಲ್ಲಿರುವ ಯೂರೋಪಿಯನ್ ಪಾರ್ಲಿಮೆಂಟ್ ಮುಚ್ಚಲಾಗಿದೆ.

ಜರ್ಮನಿಯ ಗಡಿಭಾಗದಲ್ಲಿರುವ ಈ ಪಟ್ಟಣದ ಕ್ರಿಸ್ಮಸ್ ಮಾರುಕಟ್ಟೆಗೆ ಬಿಗಿ ಭದ್ರತೆ ಒದಗಿಸಲಾಗಿದ್ದರೂ, ರಾತ್ರಿ 8ರ ಸುಮಾರಿಗೆ ಬ್ರಿಡ್ಜ್ ಮೂಲಕ ಪ್ರವೇಶಿಸಿದ ದಾಳಿಕೋರ, ಗುಂಡುಹಾರಿಸಲು ಆರಂಭಿಸಿದ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News