28 ವರ್ಷಗಳ ನಂತರ ಅರ್ಥಶಾಸ್ತ್ರಜ್ಞರಲ್ಲದ ಅಧಿಕಾರಿ ಆರ್ ಬಿಐ ಗವರ್ನರ್

Update: 2018-12-12 09:21 GMT

ಹೊಸದಿಲ್ಲಿ, ಡಿ.12: ಊರ್ಜಿತ್ ಪಟೇಲ್ ರಾಜೀನಾಮೆ ನಂತರ ಕೇಂದ್ರದ ನರೇಂದ್ರ ಮೋದಿ ಸರಕಾರ ಆರ್‍ಬಿಐ ಗವರ್ನರ್ ಆಗಿ ಶಕ್ತಿಕಾಂತ ದಾಸ್ ಅವರನ್ನು ನೇಮಿಸಿದೆ. ದಾಸ್ ಇತಿಹಾಸದಲ್ಲಿ ಸ್ನಾತ್ತಕೋತ್ತರ ಪದವೀಧರರಾಗಿದ್ದು, ಕಳೆದ 28 ವರ್ಷಗಳಲ್ಲಿ  ಆರ್‍ಬಿಐ ಗವರ್ನರ್ ಹುದ್ದೆಯನ್ನು ವಹಿಸಿರುವ  ಅರ್ಥಶಾಸ್ತ್ರಜ್ಞರಲ್ಲದ ಪ್ರಥಮ ಅಧಿಕಾರಿಯಾಗಿದ್ದಾರೆ.

ನಿವೃತ್ತ ಐಎಎಸ್ ಅಧಿಕಾರಿಯಾಗಿರುವ ದಾಸ್ ಅವರು ಆರ್‍ಬಿಐ ನ 25ನೇ ಗವರ್ನರ್ ಆಗಿದ್ದಾರೆ. ಆರ್‍ಬಿಐ  ಗವರ್ನರ್ ಹುದ್ದೆ ಪಡೆದಿದ್ದ ಈ ಹಿಂದಿನ ಕೊನೆಯ ಐಎಎಸ್ ಅಧಿಕಾರಿ ಡಿ ಸುಬ್ಬರಾವ್ ಆಗಿದ್ದರೂ ಅವರು ಕೂಡ ಅವರ ಪೂರ್ವಾಧಿಕಾರಿ ವೈ ವಿ ರೆಡ್ಡಿ ಅವರಂತೆಯೇ ಅರ್ಥಶಾಸ್ತ್ರಜ್ಞರಾಗಿದ್ದರು. ಇಲ್ಲಿಯ ತನಕ ಆರ್‍ಬಿಐ 25 ಗವರ್ನರ್‍ಗಳನ್ನು ಕಂಡಿದ್ದರೆ ಅವರಲ್ಲಿ 14 ಮಂದಿ ಅಧಿಕಾರಿಗಳಾಗಿದ್ದು ಅವರಲ್ಲಿ 12 ಮಂದಿ ಐಎಎಸ್/ಐಸಿಎಸ್ ಅಧಿಕಾರಿಗಳಾಗಿದ್ದರು.

ಹೊಸ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ದಿಲ್ಲಿ ವಿವಿಯಿಂದ ಪದವಿ ಮತ್ತು ಸ್ನಾತ್ತಕೋತ್ತರ ಪದವಿ ಪಡೆದ ನಂತರ ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ ಫೈನಾನ್ಶಿಯಲ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡಿದ್ದಾರೆ. ಅವರ ಪೂರ್ವಾಧಿಕಾರಿಗಳಾದ ಉರ್ಜಿತ್ ಪಟೇಲ್ ಮತ್ತು ರಘುರಾಮ್ ರಾಜನ್ ಇಬ್ಬರೂ ಖ್ಯಾತ ಅರ್ಥಶಾಸ್ತ್ರಜ್ಞರಾಗಿದ್ದಾರೆ. ಇಬ್ಬರೂ ಈ ಹಿಂದೆ ಐಎಂಎಫ್‍ ಗೂ ಸೇವೆ ಸಲ್ಲಿಸಿದವರಾಗಿದ್ದಾರೆ.

1990ರಲ್ಲಿ ಎಸ್ ವೆಂಕಿಟರಾಮನ್ ಅವರು ಆರ್‍ಬಿಐ ಗವರ್ನರ್ ಆಗಿ ನೇಮಕಗೊಂಡಾಗ ಈ ಹುದ್ದೆ ಪಡೆದ ಮೊದಲ ಐಎಎಸ್ ಅಧಿಕಾರಿಯಾಗಿದ್ದರು. ಆವರು ಅದಕ್ಕಿಂತಲೂ ಮೊದಲು ಸಚಿವಾಲಯದ ಕಾರ್ಯದರ್ಶಿಯಾಗಿದ್ದರು. ಆದರೆ ಶಕ್ತಿಕಾಂತ ದಾಸ್ ಅವರು ಆರಂಭದಲ್ಲಿ ಕಂದಾಯ ಕಾರ್ಯದರ್ಶಿಯಾಗಿದ್ದರು. ನಂತರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿದ್ದ ವೇಳೆ ನರೇಂದ್ರ ಮೋದಿ ಸರಕಾರದ ಅಮಾನ್ಯೀಕರಣ  ಜಾರಿ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಮೋದಿ ಸರಕಾರ ಶಕ್ತಿಕಾಂತ ದಾಸ್ ಅವರನ್ನು ಐದು ವರ್ಷಗಳ ಅವಧಿಗೆ ಆರ್‍ಬಿಐ ಗವರ್ನರ್ ಆಗಿ ನೇಮಿಸಿದೆ. ಅವರ ಪೂರ್ವಾಧಿಕಾರಿಗಳಾದ ಉರ್ಜಿತ್ ಪಟೇಲ್ ಹಾಗೂ ರಘುರಾಮ್ ರಾಜನ್ ಅವರನ್ನು ಮೂರು ವರ್ಷದ ಅವಧಿಗೆ ನೇಮಕ ಮಾಡಲಾಗಿತ್ತು. 1990ರ ನಂತರ ತಮ್ಮ ಅವಧಿ ಪೂರ್ವ ರಾಜೀನಾಮೆ ನೀಡಿದ  ಆರ್‍ಬಿಐ ಗವರ್ನರ್‍ಗಳ ಪೈಕಿ ಉರ್ಜಿತ್ ಪಟೇಲ್ ಮೊದಲಿಗರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News