ಚಿಂದಿ ಆಯುವವರ ಬದುಕು ಇನ್ನು ಸುಭದ್ರ: ಕೆಲಸ ಕೊಡಲಿರುವ ಬಿಬಿಎಂಪಿ

Update: 2018-12-12 13:39 GMT

ಬೆಂಗಳೂರು, ಡಿ.12: ತ್ಯಾಜ್ಯ ನಿರ್ವಹಣೆ ವಿಚಾರದಲ್ಲಿ ಹಲವು ಹೊಸ ನಿಯಮಗಳನ್ನು ಜಾರಿ ತರುತ್ತಿರುವ ಬಿಬಿಎಂಪಿ, ನಗರದಲ್ಲಿರುವ ಚಿಂದಿ ಆಯುವವರಿಗೂ ಹೊಸ ಕೆಲಸ ನೀಡಲು ಮುಂದಾಗಿದೆ.

ಹೌದು, ಈವರೆಗೆ ಕೇವಲ ರಸ್ತೆ ಬದಿಯಲ್ಲಿ, ಮೈದಾನಗಳಲ್ಲಿ ಬೀಳುತ್ತಿದ್ದ ಬಾಟಲ್, ಪ್ಲಾಸ್ಟಿಕ್ ಹೆಕ್ಕುತ್ತಿದ್ದ ಚಿಂದಿ ಆಯುವವರು ಇನ್ನು ಮುಂದೆ ಪ್ರತಿ ಮನೆಯ ಒಣಕಸ ಸಂಗ್ರಹಿಸಲಿದ್ದಾರೆ.

ಬಿಬಿಎಂಪಿ ಈ ಬಾರಿ ಹಸಿ ಕಸಕ್ಕೆ ಮಾತ್ರ ಟೆಂಡರ್ ಕರೆಯುತ್ತಿದ್ದು, ಹಸಿ ಕಸವನ್ನು ಮಾತ್ರ ಗುತ್ತಿಗೆದಾರರು ಪ್ರತಿ ಮನೆಯಿಂದ ಪ್ರತ್ಯೇಕವಾಗಿ ಸಂಗ್ರಹಿಸಲಿದ್ದಾರೆ. ಹಾಗಾದರೆ ಒಣಕಸ ಸಂಗ್ರಹಿಸುವವರು ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ವಿಶೇಷ ಆಯುಕ್ತ ರಂದೀಪ್, ಈಗಾಗಲೇ ಪಾಲಿಕೆ ವ್ಯಾಪ್ತಿಯ 7 ಸಾವಿರ ಚಿಂದಿ ಆಯುವವರ ದಾಖಲೆಯನ್ನು ಪಾಲಿಕೆ ಸಂಗ್ರಹಿಸಿದೆ. ಇವರಿಗೆ ಬಿಬಿಎಂಪಿ ಗುರುತಿನ ಚೀಟಿ ನೀಡಲಿದೆ. ಅಲ್ಲದೆ ಅವರನ್ನೇ ಒಣ ಕಸ ಸಂಗ್ರಹಿಸಲು ನೇಮಿಸಿ ಪ್ರತಿ ಮನೆಯಿಂದ ಒಣ ಕಸ ತೆಗೆದುಕೊಳ್ಳಲಿದ್ದಾರೆ. ಬಳಿಕ ಹತ್ತಿರದಲ್ಲಿರುವ ಒಣ ಕಸ ಕೇಂದ್ರಗಳಿಗೆ ತಲುಪಿಸಬೇಕು. ಅದಕ್ಕೆ ಬೇಕಾದ ಬೆಲೆಯನ್ನು ಒಣ ಕಸ ಕೇಂದ್ರಗಳು ಚಿಂದಿ ಆಯುವವರಿಗೆ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

ಎಲ್ಲಾ ವಾರ್ಡ್‌ಗಳಲ್ಲಿ ಒಣ ಕಸ ಕೇಂದ್ರ ಇಲ್ಲದೇ ಇದ್ದ ಕಡೆ ಚಿಂದಿ ಆಯುವವರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಹೊಸ ನಿಯಮ ತಂದು ಕೌನ್ಸಿಲ್ ಒಪ್ಪಿಗೆ ಪಡೆದು ಜಾರಿಗೊಳಿಸಲಾಗುವುದು. ಅಲ್ಲದೇ, ಚಿಂದಿ ಆಯುವವರಿಗೆ ಬೇಕಾದ ವಾಹನದ ವ್ಯವಸ್ಥೆ, ಪ್ರೋತ್ಸಾಹ ಧನ ಮುಂತಾದ ಅಗತ್ಯ ಸಹಾಯಗಳನ್ನು ಬಿಬಿಎಂಪಿ ಮಾಡಲಿದೆ. ಈಗಾಗಲೇ ಇರುವ ಘನತ್ಯಾಜ್ಯ ನಿಯಮೂ ಇದನ್ನು ಹೇಳುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News