ಬೆಂಗಳೂರು: ಗುಂಡು ಹಾರಿಸಿ ಬಾಂಗ್ಲಾ ಮೂಲದ ಡಕಾಯಿತರಿಬ್ಬರ ಬಂಧನ

Update: 2018-12-12 13:43 GMT

ಬೆಂಗಳೂರು, ಡಿ.12: ನಗರದಲ್ಲಿ ತಲೆಮರಿಸಿಕೊಂಡು ಸುತ್ತಾಡುತ್ತಿದ್ದ ಬಾಂಗ್ಲಾ ಮೂಲದ ಇಬ್ಬರು ಡಕಾಯಿತರ ಮೇಲೆ ಕೆ.ಆರ್.ಪುರ ಪೊಲೀಸರು ಗುಂಡು ಹಾರಿಸಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರ ಗುಂಡೇಟಿನಿಂದ ಗಾಯಗೊಂಡವರನ್ನು ಬಾಂಗ್ಲಾದ ಮುನೀರ್(38) ಹಾಗೂ ಮಿಲನ್(27) ಎಂದು ಗುರುತಿಸಿದ್ದು, ಈ ಇಬ್ಬರೂ ದಿಲ್ಲಿ, ಉತ್ತರ ಪ್ರದೇಶ, ಗೋವಾ ಸೇರಿದಂತೆ ಹಲವು ಸ್ಥಳಗಳಲ್ಲಿ ಡಕಾಯಿತಿ ನಡೆಸುತ್ತಾ, ಬೆಂಗಳೂರು ನಗರದಲ್ಲಿ ತಲೆಮರೆಸಿಕೊಂಡಿದ್ದರು. ದಿಲ್ಲಿ ಪೊಲೀಸರು ನೀಡಿದ ಮಾಹಿತಿ ಆಧರಿಸಿ ಕೆ.ಆರ್.ಪುರಂ ಪೊಲೀಸ್ ಠಾಣೆಯ ಇನ್ಸ್‌ಸ್ಪೆಕ್ಟರ್ ಜಯರಾಮ್, ಸಬ್‌ಇನ್ಸ್‌ಸ್ಪೆಕ್ಟರ್ ಶ್ರೀನಿವಾಸ್ ದೊಡ್ಡಮನಿ ನೇತೃತ್ವದ ಎರಡು ವಿಶೇಷ ತಂಡಗಳು ಡಕಾಯಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬುಧವಾರ ಬೆಳಗ್ಗೆ ವೈಟ್‌ಫೀಲ್ಡ್‌ನ ರೈಲು ನಿಲ್ದಾಣದ ಸಮೀಪಕ್ಕೆ ಬರುತ್ತಾರೆ ಎಂಬ ಖಚಿತ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಎರಡು ವಿಶೇಷ ತಂಡಗಳು ಕಾರ್ಯಾಚರಣೆ ನಡೆಸಿ ಇಮ್ಮಡಿಹಳ್ಳಿ-ಅಜಗೊಂಡನಹಳ್ಳಿ ರಸ್ತೆಯಲ್ಲಿ ಆರೋಪಿಗಳನ್ನು ಬಂಧಿಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಡಕಾಯಿತ ಮುನೀರ್ ಬಳಿಯಿದ್ದ ಡ್ರಾಗರ್‌ನಿಂದ ಪೊಲೀಸ್ ಕಾನ್‌ಸ್ಟೇಬಲ್ ಮಂಜುನಾಥ್ ಮೇಲೆ ದಾಳಿ ನಡೆಸಿ, ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದರು.

ಈ ವೇಳೆ ಇನ್ಸ್‌ಸ್ಪೆಕ್ಟರ್ ಜಯರಾಮ್ ಡಕಾಯಿತರಿಗೆ ಎಚ್ಚರಿಕೆ ನೀಡುತ್ತಿದ್ದರೂ ಲೆಕ್ಕಿಸದೇ ಹಲ್ಲೆಗೆ ಮುಂದಾದ್ದರಿಂದ ಸಿಬ್ಬಂದಿ ತಮ್ಮ ರಕ್ಷಣೆಗಾಗಿ ತಮ್ಮಲ್ಲಿದ್ದ ಸರ್ವೀಸ್ ಪಿಸ್ತೂಲಿನಿಂದ ಗಾಳಿಯಲ್ಲಿ ಎರಡು ಸುತ್ತಿನ ಗುಂಡು ಹಾರಿಸಿದ್ದಾರೆ. ಆದರೂ, ಅವರು ಪರಾರಿಯಾಗಲು ಮುಂದಾಗಿದ್ದರು.

ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಚಂದ್ರಪ್ಪ ಆರೋಪಿಯನ್ನು ಹಿಡಿಯಲು ಮುಂದಾದ ವೇಳೆ ಆತನ ಎಡಗಾಲಿಗೆ ಚಾಕುವಿಂದ ಚುಚ್ಚಿ ತಪ್ಪಿಸಿಕೊಳ್ಳಲು ಮುಂದಾಗಿದ್ದು, ಹಿಂದೆ ಇದ್ದ ಎಸ್‌ಐ ಶ್ರೀನಿವಾಸ್ ದೊಡ್ಡಮನಿ ಗುಂಡು ಹಾರಿಸಿದ್ದರು. ಅದು ಡಕಾಯಿತನ ಬಲಗಾಲಿಗೆ ತಗುಲಿ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದು, ಕೂಡಲೇ ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.

ಆರೋಪಿಗಳ ಹಿನ್ನೆಲೆ: ಬಾಂಗ್ಲಾ ಮೂಲದವರಾದ ಇಬ್ಬರೂ ಉತ್ತರ ಭಾರತದಲ್ಲಿನ ಅನೇಕ ರಾಜ್ಯಗಳಲ್ಲಿ ಡಕಾಯಿತಿ ನಡೆಸಿದ ಪ್ರಕರಣಗಳು ವರದಿಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮುನೀರ್ ಉತ್ತರ ಪ್ರದೇಶದ ನೋಯ್ಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2002ರಲ್ಲಿ ಡಕಾಯಿತಿ ಪ್ರಕರಣದಲ್ಲಿ ಭಾಗಿಯಾಗಿ ಏಳು ವರ್ಷ ಸೆರೆಮನೆಯಲ್ಲಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

ಅನಂತರ ಈ ವರ್ಷದ ಜೂನ್‌ನಲ್ಲಿ ಗೋವಾ ರಾಜ್ಯದ ಮಡಗಾವ್ ಹಾಗೂ ಪೋಂಡಾ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ನಡೆದ ಡಕಾಯಿತಿ ಪ್ರಕರಣಗಳಲ್ಲೂ ಈ ಆರೋಪಿಗಳು ಭಾಗಿಯಾಗಿದ್ದರು. ಉತ್ತರ ಭಾರತದ ಡಕಾಯಿತರನ್ನು ಸೆರೆಹಿಡಿದ ಪೊಲೀಸರನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News