ಬೆಂಗಳೂರು: ಮಾನವ ಕಳ್ಳ ಸಾಗಾಣಿಕೆದಾರರ ಬಂಧನ; 35 ನೇಪಾಳಿ ಯುವತಿಯರ ರಕ್ಷಣೆ

Update: 2018-12-12 14:22 GMT

ಬೆಂಗಳೂರು, ಡಿ.12: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯರನ್ನು ಕರೆಸಿಕೊಂಡು, ಅಕ್ರಮ ಬಂಧನದಲ್ಲಿರಿಸಿ ಮಾನವ ಕಳ್ಳ ಸಾಗಾಣಿಕೆಗೆ ಯತ್ನಿಸಿದ್ದ ನೇಪಾಳ ಮೂಲದ ನಾಲ್ವರು ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ನೇಪಾಳ ಮೂಲದ ಕಿಶನ್ ಗಾಲೆ (29), ಲಕ್ಷ್ಮಣ್ ಗಾಲೆ(29), ರಾಕೇಶ್ ಶರ್ಮ (38) ಹಾಗೂ ತಾಗ್ ಬಹದ್ದೂರ್ ತಾಪ(32) ಬಂಧಿತ ಆರೋಪಿಗಳಾಗಿದ್ದು, ಅಕ್ರಮ ಹಣ ಸಂಪಾದನೆ ಉದ್ದೇಶದಿಂದ ಸಂಘಟಿತ ಜಾಲವನ್ನು ರೂಪಿಸಿಕೊಂಡಿದ್ದರು ಎನ್ನಲಾಗಿದೆ.

ವಿದೇಶಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಸುಮಾರು 35 ಅಮಾಯಕ ಯುವತಿಯರನ್ನು ಕರೆತಂದು, ಕಾಟನ್‌ಪೇಟೆಯ ಸುಧಾ ಲಾಡ್ಜ್‌ನಲ್ಲಿ ಅಕ್ರಮ ಬಂಧನದಲ್ಲಿರಿಸಿ, ಏಜೆಂಟ್‌ಗಳ ಮೂಲಕ ವಿದೇಶಕ್ಕೆ ಮಾನವ ಕಳ್ಳ ಸಾಗಾಣಿಕೆ ಮಾಡಲು ಸಂಚು ರೂಪಿಸಿದ್ದರು ಎಂದು ಸಿಸಿಬಿ ವಿಭಾಗದ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.

ಆರೋಪಿಗಳ ಬಳಿಯಿದ್ದ ಲ್ಯಾಪ್‌ಟಾಪ್ ಮತ್ತು ಪ್ರಿಂಟರ್‌ಗಳ ಮೂಲಕ ಯುವತಿಯರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು. 2 ಲ್ಯಾಪ್‌ಟಾಪ್, 1 ಪ್ರಿಂಟರ್, 6 ಮೊಬೈಲ್, 6 ನಕಲಿ ಸೀಲ್, 2 ಪಾಸ್‌ಪೋರ್ಟ್ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರು ಆರೋಪಿಗಳಾದ ವೆಂಕಟೇಶ್ವರ್ ರಾವ್ ಮತ್ತು ಬಿ.ನವರಾಜ್ ತಲೆಮರೆಸಿಕೊಂಡಿದ್ದು ತೀವ್ರ ಶೋಧ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

ಇವರು ವಿದೇಶಗಳಲ್ಲಿನ ಮಾನವ ಕಳ್ಳ ಸಾಗಾಣಿಕೆ ಏಜೆಂಟ್‌ಗಳೊಂದಿಗೆ ಸಂಪರ್ಕ ಹೊಂದಿದ್ದರು. ಏಜೆಂಟ್‌ಗಳ ಅವಶ್ಯಕತೆಗೆ ಅನುಗುಣವಾಗಿ ಯುವತಿಯರನ್ನು ಮಾನವ ಕಳ್ಳ ಸಾಗಾಣಿಕೆ ಮಾಡುತ್ತಿದ್ದರು. ಯುವತಿಯರನ್ನು ಕಾನೂನು ಬಾಹಿರ ಚಟುವಟಿಕೆಗಳಿಗೆ ತೊಡಗಿಸಿಕೊಳ್ಳುತ್ತಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ರಕ್ಷಿಸಲಾಗಿರುವ 35 ಯುವತಿಯರು ನೇಪಾಳ ಮೂಲದವರು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News