ಬಿಬಿಎಂಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರಕಾರ್ಮಿಕರಿಂದ ಧರಣಿ

Update: 2018-12-12 15:09 GMT

ಬೆಂಗಳೂರು, ಡಿ.12: ಪೌರಕಾರ್ಮಿಕರ ಗುತ್ತಿಗೆ ಪದ್ಧತಿ ರದ್ದು, ವಾರದ ರಜೆ ಕಡ್ಡಾಯಗೊಳಿಸುವುದು ಸೇರಿಂದತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ  ಗುತ್ತಿಗೆ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಎಐಸಿಟಿಯು ಹಾಗೂ ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಸಂಘಗಳ ಸಹಯೋಗದಲ್ಲಿ ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಕಾರ್ಮಿಕರು, ಗುತ್ತಿಗೆ ಆಧಾರಿತ ಪದ್ಧತಿಯನ್ನು ಕೈಬಿಡಬೇಕು. ಪಿಎಫ್ ಮತ್ತು ಇಎಸ್‌ಐ ಸೌಲಭ್ಯಗಳೊಂದಿಗೆ ಪ್ರತಿ ತಿಂಗಳು 7ನೇ ತಾರೀಖಿನೊಳಗೆ ಸಂಬಳ ಪಾವತಿಸಬೇಕು. ಪೌರ ಕಾರ್ಮಿಕರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಡೆಯಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಗುತ್ತಿಗೆ ಪೌರಕಾರ್ಮಿಕ ಸಂಘದ ಕಾರ್ಯದರ್ಶಿ ನಿರ್ಮಲಾ, ಬಿಬಿಎಂಪಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಪೌರಕಾರ್ಮಿಕರನ್ನು ಕೀಳಾಗಿ ನಡೆಸಿಕೊಳ್ಳುತ್ತಿದ್ದಾರೆ. ಸರಿಯಾದ ಸಮಯಕ್ಕೆ ವೇತನ ನೀಡುತ್ತಿಲ್ಲ. ಇಂದಿರಾ ಕ್ಯಾಂಟೀನ್‌ನಿಂದ ಕಳೆಪೆ ಗುಣಮಟ್ಟದ ಊಟ ಪೂರೈಸುತ್ತಿದ್ದಾರೆ. ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆಯೇ ಇಲ್ಲ ಎಂದು ದೂರಿದರು.

ಪೌರಕಾರ್ಮಿಕರು ಕೆಲಸ ಮಾಡಲು ಕಡ್ಡಾಯವಾಗಿ ಸುರಕ್ಷಾ ಕವಚಗಳಾದ ಗ್ಲೌಸ್, ಮಾಸ್ಕ್, ಗಮ್ ಬೂಟ್ ಮೂಲಕ ಸ್ವಚ್ಛತೆ ಕಾರ್ಯ ನಿರ್ವಹಿಸಬೇಕು. ಜತೆಗೆ ತಳ್ಳುವ ಗಾಡಿ (ಫುಟ್‌ಕಾರ್ಟ್), ಪೊರಕೆ, ಜಾಕೆಟ್ ಒದಗಿಸಬೇಕು. ಆದರೆ, ಪಾಲಿಕೆ ಯಾವುದನ್ನೂ ಸಮರ್ಪಕವಾಗಿ ನೀಡುತ್ತಿಲ್ಲ. ಇದರಿಂದ ಪೌರಕಾರ್ಮಿಕರು ಸಾಂಕ್ರಾಮಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಪೌರಕಾರ್ಮಿಕರ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಸರ್ಫ್‌ರಾಜ್‌ಖಾನ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಈಗಾಗಲೇ ಪಾಲಿಕೆ ವತಿಯಿಂದ ಸುರಕ್ಷಾ ಕವಚಗಳನ್ನು ಕೆಲ ವಲಯಗಳಲ್ಲಿ ವಿತರಣೆ ಮಾಡಲಾಗಿದೆ. ಆದರೆ, ಪೌರಕಾರ್ಮಿಕರು ಅದನ್ನು ಬಳಸುತ್ತಿಲ್ಲ. ಪೌರಕಾರ್ಮಿಕರು ಈ ಬಗ್ಗೆ ಸೂಕ್ತ ದಾಖಲೆಗಳನ್ನು ಒದಗಿಸಿದರೆ, ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಇತರೆ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲಾಗುವುದು ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News