ಹಣ ನಿರ್ವಹಣೆಗೆ ವಿಶೇಷ ನಿರ್ದೇಶನಾಲಯ ಸ್ಥಾಪಿಸಲು ದಸಂಸ ಆಗ್ರಹ

Update: 2018-12-12 15:10 GMT

ಬೆಂಗಳೂರು, ಡಿ.12: ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಮೀಸಲಿಟ್ಟಿರುವ ಹಣವನ್ನು ಸರಿಯಾಗಿ ನಿರ್ವಹಣೆ ಮಾಡಲು ವಿಶೇಷ ಘಟಕದ ನಿರ್ದೇಶನಾಲಯವನ್ನು ಸ್ಥಾಪಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಸರ್ವಸದಸ್ಯರ ಮಹಾಸಭೆ ಆಗ್ರಹಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದ ಸಭೆಯಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಸದಸ್ಯರು ಸಭೆಯ ನಿರ್ಣಯಕ್ಕೆ ಒಕ್ಕೊರಲಿನ ಧ್ವನಿಗೂಡಿಸಿದ್ದು, ಸರಕಾರ ಕೂಡಲೇ ನಿರ್ದೇಶನಾಲಯ ಸ್ಥಾಪನೆಗೆ ಪ್ರಸ್ತಾವನೆಯಿಡಬೇಕು ಎಂದು ಆಗ್ರಹಿಸಲಾಗಿದೆ.

ಸುಪ್ರೀಂಕೋರ್ಟ್‌ನಲ್ಲಿರುವ ಪರಿಶಿಷ್ಟರ ಪಿಟಿಸಿಎಲ್ ಜಮೀನಿಗೆ ಸಂಬಂಧಿಸಿದಂತೆ ನೀಡಿರುವ ತೀರ್ಪಿಗೆ ವಿರುದ್ಧವಾಗಿ ರಾಜ್ಯ ಸರಕಾರ ಪಿಟಿಸಿಎಲ್ ಕಾಯ್ದೆಗೆ ಸೂಕ್ತ ತಿದ್ದುಪಡಿ ತರಬೇಕು. ಭಡ್ತಿ ಮೀಸಲಾತಿ ಕಾಯ್ದೆ ಅನ್ವಯ ಕೂಡಲೇ ಹಿಂಭಡ್ತಿ ಹೊಂದಿರುವವರಿಗೆ ಭಡ್ತಿ ಪ್ರಕ್ರಿಯೆಯನ್ನು ಆರಂಭಿಸಬೇಕು. ಭೂಹೀನ ಕೃಷಿ ಕಾರ್ಮಿಕರು ಉಳುಮೆ ಮಾಡುತ್ತಿರುವ ಬಗರ್‌ಹುಕುಂ ಸಕ್ರಮೀಕರಣ ಸಮಿತಿಗೆ ಜಿಲ್ಲಾಧಿಕಾರಿಯನ್ನು ಅಧ್ಯಕ್ಷರನ್ನಾಗಿಸಿ, ಶಾಸಕರ ಅಧ್ಯಕ್ಷತೆಯನ್ನು ರದ್ದು ಮಾಡಬೇಕು ಹಾಗೂ ಕಾಲಮಿತಿಯೊಳಗೆ ಭೂ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.

ಅದರ ಜತೆಗೆ, ಸರಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಬೇಕು ಹಾಗೂ ಆರ್‌ಟಿಇ ಕಾಯ್ದೆಯಡಿ ಖಾಸಗಿ ಶಾಲೆಗಳಿಗೆ ಪ್ರವೇಶ ನೀಡುವ ಪದ್ಧತಿಯನ್ನು ರದ್ದು ಮಾಡಬೇಕು. ಸರಕಾರಿ ಹಾಸ್ಟೆಲ್‌ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಗುಣಮಟ್ಟದ ಆಹಾರ ಹಾಗೂ ವಿಶೇಷ ತರಗತಿ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು. ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸಂಬಂಧಿಸಿದ ಹಲವು ಬೇಡಿಕೆಗಳನ್ನು ಸಭೆಯಲ್ಲಿ ಅಂಗೀಕರಿಸಿ, ಈಡೇರಿಸಬೇಕು ಎಂದು ಸರಕಾರಗಳನ್ನು ಒತ್ತಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News