‘ಬುಲಂದ್‌ಶಹರ್’ ರೀತಿಯ ಪರಿಸ್ಥಿತಿ ಸೃಷ್ಟಿಸುವ ಬೆದರಿಕೆ: ಬಿಜೆಪಿ ಮುಖಂಡನ ವಿರುದ್ಧ ಎಫ್‌ಐಆರ್ ದಾಖಲು

Update: 2018-12-12 15:19 GMT

ಲಕ್ನೊ, ಡಿ.12: ಪೊಲೀಸರ ವಿರುದ್ಧ ನಿಂದನೀಯ ಭಾಷೆ ಪ್ರಯೋಗಿಸಿದ್ದಲ್ಲದೆ ಬುಲಂದ್‌ಶಹರ್‌ನಲ್ಲಿ ಉಂಟಾಗಿದ್ದ ಸನ್ನಿವೇಶ ಮತ್ತೆ ಸೃಷ್ಟಿಯಾದೀತು ಎಂದು ಬೆದರಿಸಿದ್ದ ಆರೋಪದಡಿ ಬಿಜೆಪಿಯ ಹಾಪುರ್ ಘಟಕದ ಪ್ರಧಾನ ಕಾರ್ಯದರ್ಶಿಯ ವಿರುದ್ಧ ಉತ್ತರಪ್ರದೇಶ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಬುಲಂದ್‌ಶಹರ್ ಜಿಲ್ಲೆಯಲ್ಲಿ ಡಿಸೆಂಬರ್ 3ರಂದು ನಡೆದಿದ್ದ ಗುಂಪು ಹಿಂಸಾಚಾರದಲ್ಲಿ ಪೊಲೀಸ್ ಅಧಿಕಾರಿ ಹಾಗೂ ಓರ್ವ ನಾಗರಿಕನ ಹತ್ಯೆಯಾಗಿತ್ತು. ಗೋಹತ್ಯೆ ನಡೆದಿದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿ ಕನಿಷ್ಟ 9 ಮಂದಿಯನ್ನು ಇದುವರೆಗೆ ಬಂಧಿಸಲಾಗಿದೆ. ರವಿವಾರ ಹಫೀಝ್‌ಪುರ ಗ್ರಾಮದಲ್ಲಿ ಸ್ಥಳೀಯ ಬಿಜೆಪಿ ಮುಖಂಡ ಹಾಗೂ ವ್ಯಕ್ತಿಯೊಬ್ಬನ ಮಧ್ಯೆ ವಾಗ್ವಾದ ನಡೆದಿದ್ದು ಆಗ ಬಿಜೆಪಿ ಮುಖಂಡ ಆ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಬಳಿಕ ಪೊಲೀಸರು ಬಿಜೆಪಿ ಮುಖಂಡನನ್ನು ಬಂಧಿಸಿದ್ದಾರೆ. ಈ ಸಂದರ್ಭ ಠಾಣೆಗೆ ಕರೆ ಮಾಡಿದ್ದ ಬಿಜೆಪಿ ಹಾಪುರ್ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಜಿಂದಾಲ್ ಎಂಬಾತ ಪೊಲೀಸರನ್ನು ನಿಂದಿಸಿದ್ದಾನೆ ಮತ್ತು ಬಂಧಿತನನ್ನು ಬಿಡುಗಡೆ ಮಾಡದಿದ್ದರೆ ಠಾಣೆಯ ಹೊರಗಡೆ ಸುಮಾರು 250 ಮಂದಿಯನ್ನು ಒಟ್ಟುಸೇರಿಸಿ ‘ಬುಲಂದ್‌ಶಹರ್ ನಂತಹ ಪರಿಸ್ಥಿತಿ’ ನಿರ್ಮಿಸುವುದಾಗಿ ಬೆದರಿಕೆ ಒಡ್ಡಿದ್ದಾನೆ.

ಜಿಂದಾಲ್‌ನ ಹೇಳಿಕೆಯನ್ನು ಪೊಲೀಸರು ರೆಕಾರ್ಡ್ ಮಾಡಿಕೊಂಡಿದ್ದಾರೆ ಎಂದು ಹಾಪುರ್ ಪೊಲೀಸ್ ಠಾಣೆಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಂದಾಲ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News