ತೆಲಂಗಾಣದ ಮುಖ್ಯಮಂತ್ರಿಯಾಗಿ ನಾಳೆ ಕೆಸಿಆರ್ ಪ್ರಮಾಣ ವಚನ ಸ್ವೀಕಾರ

Update: 2018-12-12 16:13 GMT

ಹೈದರಾಬಾದ್, ಡಿ. 12: ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಅಧ್ಯಕ್ಷ ಕೆ. ಚಂದ್ರಶೇಖರ ರಾವ್ ಅವರು ಗುರುವಾರ ತೆಲಂಗಾಣದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ತೆಲಂಗಾಣ ವಿಧಾನ ಸಭೆ ಚುನಾವಣೆ ಫಲಿತಾಂಶ ಮಂಗಳವಾರ ಘೋಷಣೆಯಾಗಿದ್ದು, ಟಿಆರ್‌ಎಸ್ ಜಯಭೇರಿ ಬಾರಿಸಿದೆ.

ವಿಧಾನ ಸಭೆಯ ಒಟ್ಟು 119 ಸ್ಥಾನಗಳಲ್ಲಿ ಟಿಆರ್‌ಎಸ್ 88 ಸ್ಥಾನಗಳನ್ನು ಪಡೆದುಕೊಂಡಿದೆ. ಗಜೇವಾಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆ. ಚಂದ್ರಶೇಖರ್ ರಾವ್ 50 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ರಾವ್ ಅವರ ಸರಕಾರದಲ್ಲಿ ಸಚಿವರಾಗಿರುವ ಟಿಆರ್‌ಎಸ್ ಅಭ್ಯರ್ಥಿ ತಲಸಾನಿ ಶ್ರೀನಿವಾಸ ಯಾದವ್ ಸನತ್‌ನಗರ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು, 30,217 ಮತಗಳ ಅಂತರದಿಂದ ವಿಜಯಿಯಾಗಿದ್ದಾರೆ. ಕೆಸಿಆರ್ ಪುತ್ರ ಕೆ.ಟಿ. ರಾಮ ರಾವ್ ಸಿರ್ಸಿಲ್ಲಾ ಕ್ಷೇತ್ರದಿಂದ ಸ್ಪರ್ಧಿಸಿದ್ದು, 89,909 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ಕಾಂಗ್ರೆಸ್ ಹಾಗೂ ತೆಲುಗು ದೇಶಂ ಪಕ್ಷ (ಟಿಡಿಪಿ)ದ ಮೈತ್ರಿ ಪ್ರಜಾಕುಟಮಿ 21 ಸ್ಥಾನಗಳನ್ನು ಪಡೆದುಕೊಂಡಿದೆ. ಬಿಜೆಪಿ ಕೇವಲ 1 ಸ್ಥಾನ ಪಡೆದುಕೊಂಡಿದೆ. ಎಐಎಂಐಎಂ 7 ಸ್ಥಾನಗಳನ್ನು ಪಡೆದುಕೊಂಡಿದೆ. ಡಿಸೆಂಬರ್ 7ರಂದು ತೆಲಂಗಾಣದಲ್ಲಿ ಒಂದೇ ಹಂತದ ಚುನಾವಣೆ ನಡೆದಿದ್ದು, ಶೇ. 73.2 ಮತದಾನವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News