ತೆಲಂಗಾಣ: ಬಿಜೆಪಿಯ 15 ಅಭ್ಯರ್ಥಿಗಳಿಗೆ ನೋಟಾಗಿಂತಲೂ ಕಡಿಮೆ ಮತ

Update: 2018-12-12 16:50 GMT

ಹೈದರಾಬಾದ್,ಡಿ.12: ತೆಲಂಗಾಣದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ 2.25 ಲಕ್ಷ ನೋಟಾ ಮತಗಳು ಚಲಾವಣೆಯಾಗಿದ್ದು, 2014ರ ಚುನಾವಣೆಗೆ ಹೋಲಿಸಿದರೆ ಶೇ.47 ಏರಿಕೆ ಕಂಡಿದೆ. ಈ ಚುನಾವಣೆಯಲ್ಲಿ 2,24,709 ಮತದಾರರು ನೋಟಾ (ಮೇಲಿನದ್ದು ಯಾವುದೂ ಅಲ್ಲ) ಆಯ್ಕೆಯನ್ನು ಒತ್ತುವ ಮೂಲಕ ತಮ್ಮ ಕ್ಷೇತ್ರದ ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸಿದ್ದಾರೆ.

2014ರ ಚುನಾವಣೆಯಲ್ಲಿ ಈ ಪ್ರಮಾಣ 1.52 ಲಕ್ಷ ಇತ್ತು ಎಂದು ಚುನಾವಣಾ ಆಯೋಗ ತಿಳಿಸಿದೆ. ಡಿಸೆಂಬರ್ 7ರಂದು ನಡೆದ ಚುನಾವಣೆಯಲ್ಲಿ 2.05 ಕೋಟಿ ಮತಗಳು ಚಲಾವಣೆಯಾಗಿತ್ತು. ಈ ಪೈಕಿ 2.25 ಲಕ್ಷ ಅಂದರೆ ಶೇ.1.1 ನೋಟಾ ಮತಗಳಾಗಿವೆ ಎಂದು ಆಯೋಗ ತಿಳಿಸಿದೆ. ಬಿಜೆಪಿಯ ಹದಿನೈದು ಅಭ್ಯರ್ಥಿಗಳು ನೋಟಾಗಿಂತಲೂ ಕಡಿಮೆ ಮತಗಳನ್ನು ಪಡೆದುಕೊಂಡಿದ್ದಾರೆ. ಪಕ್ಷವು 119 ಕ್ಷೇತ್ರಗಳಲ್ಲಿ 118ರಲ್ಲಿ ಸ್ಪರ್ಧಿಸಿದ್ದು ಒಂದರಲ್ಲಿ ಗೆಲುವು ಸಾಧಿಸಿದೆ ಎಂದು ಆಯೋಗ ತಿಳಿಸಿದೆ.

ನೋಟಾದ ಮತ ಗಳಿಕೆ ಪ್ರಮಾಣವು ಸಿಪಿಐ ಮತ್ತು ಕೋದಂಡರಾಮ ನೇತೃತ್ವದ ತೆಲಂಗಾಣ ಜನ ಸಮಿತಿಯ ಒಟ್ಟಾರೆ ಮತ ಗಳಿಕೆಗಿಂತ ಅಧಿಕವಾಗಿದೆ. ಕಾಂಗ್ರೆಸ್ ನೇತೃತ್ವದ ಮೈತ್ರಿಯ ಭಾಗವಾಗಿದ್ದ ಈ ಎರಡು ಪಕ್ಷಗಳು ಒಂದು ಸ್ಥಾನವನ್ನು ಗೆಲ್ಲಲೂ ಸಾಧ್ಯವಾಗಿಲ್ಲ ಎಂದು ಆಯೋಗ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News