ಹೊಗಳುತ್ತಲೆ ರೈತರ ಬೆನ್ನು ಮುರಿಯುವ ಅಧಿಕಾರಸ್ಥರು: ಹೈಕೋರ್ಟ್ ಆಕ್ರೋಶ

Update: 2018-12-12 16:59 GMT

ಬೆಂಗಳೂರು, ಡಿ.12: ಅಧಿಕಾರಕ್ಕೆ ಬರುವವರು ಹಾಗೂ ಅಧಿಕಾರ ವರ್ಗದವರು ರೈತ ದೇಶದ ಬೆನ್ನೆಲುಬು ಎಂದು ಹಾಡಿ ಹೊಗಳುತ್ತಾರೆ. ಆದರೆ, ಆತನ ಬೆನ್ನನ್ನೆ ಮುರಿದು ಮೂಲೆಗೆ ಕೂರಿಸುತ್ತಾರೆ ಎಂದು ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. 

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಗ್ರಾಮದ ರೈತ ಬಿ.ಎಂ.ಪ್ರಕಾಶ್ ಅವರಿಗೆ ಸೇರಿದೆ ಎನ್ನಲಾದ ನಾಲ್ಕು ಎಕರೆ ಜಮೀನು ಅರಣ್ಯ ಪ್ರದೇಶವೆಂದು ಹೇಳಿ ಕೋಲಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠವು ರಾಜಕಾರಣಿಗಳು ಅಧಿಕಾರಕ್ಕೆ ಬರುವ ಮೊದಲು ಹಾಗೂ ಅಧಿಕಾರಕ್ಕೆ ಬಂದ ಮೇಲೆ ರೈತರನ್ನು ರಕ್ಷಣೆ ಮಾಡುತ್ತೇವೆ ಎಂದು ವೇದಿಕೆಯಲ್ಲಿ ಭಾಷಣ ಮಾಡುತ್ತಾರೆ. ಆದರೆ, ಯಾವುದೇ ರಕ್ಷಣೆಯನ್ನು ಮಾಡದೇ ರೈತರ ಬೆನ್ನೆಲುಬನ್ನು ಮುರಿಯುತ್ತಾರೆ ಎಂದು ಮೌಖಿಕವಾಗಿ ಹೇಳಿದರು. ಅರ್ಜಿದಾರ ಬಿ.ಎಂ.ಪ್ರಕಾಶ್ ಪರ ವಾದಿಸಿದ ವಕೀಲರು, ಶ್ರೀನಿವಾಸಪುರ ಗ್ರಾಮದಲ್ಲಿ 4.38 ಎಕರೆ ಜಮೀನು ಪ್ರಕಾಶ್ ಅವರ ಹೆಸರಿನಲ್ಲಿದೆ. ಆದರೆ, 2007ರಲ್ಲಿ ಆ ಜಮೀನು ಅರಣ್ಯ ಇಲಾಖೆಗೆ ಸೇರಿದೆ ಎಂದು ಆದೇಶ ಹೊರಡಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ನ್ಯಾಯಪೀಠವು ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಕಂದಾಯ ಇಲಾಖೆ ಕಾರ್ಯದರ್ಶಿ, ಶ್ರೀನಿವಾಸಪುರ ವಲಯ ಅರಣ್ಯಾಧಿಕಾರಿ, ಕೋಲಾರ ಉಪ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿಗೆ ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಿತು.

ಏನಿದು ಪ್ರಕರಣ: ಕೋಲಾರದ ಶ್ರೀನಿವಾಸಪುರ ತಾಲೂಕಿನ ಶ್ರೀನಿವಾಸಪುರ ಗ್ರಾಮದ ಸರ್ವೇ ನಂಬರ್ 84ರಲ್ಲಿ ಪ್ರಕಾಶ್ ಎಂಬುವವರಿಗೆ ಸೇರಿದ 4.38 ಎಕರೆ ಜಮೀನು ಇದೆ. ಆದರೆ, ಈ ಜಮೀನು ಅರಣ್ಯ ಇಲಾಖೆಗೆ ಸೇರಿದ್ದು, ಅದನ್ನು ತೆರವುಗೊಳಿಸಬೇಕು ಎಂದು 2007ರಲ್ಲಿ ಕೋಲಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆದೇಶಿಸಿದ್ದರು. ಈ ಆದೇಶ ಪ್ರಶ್ನಿಸಿ ಪ್ರಕಾಶ್ ಸಲ್ಲಿಸಿದ್ದ ಮೇಲ್ಮನವಿಯನ್ನು 2014ರಲ್ಲಿ ಜೂನ್ 6ರಂದು ಬೆಂಗಳೂರಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಜಾಗೊಳಿಸಿದ್ದರು. ಆದೇಶ ಪ್ರಶ್ನಿಸಿ ಪ್ರಕಾಶ್ ಹೈಕೋರ್ಟ್‌ಗೆ 2014ರಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News