ಡಿ.17ಕ್ಕೆ ಬೆಳಗಾವಿಯಲ್ಲಿ ಭೀಮಶಕ್ತಿ ಅಧಿವೇಶನ: ಎಸ್‌ಎಸ್‌ಡಿ

Update: 2018-12-12 17:15 GMT

ಬೆಂಗಳೂರು, ಡಿ.12: ರಾಜ್ಯ ಸರಕಾರದ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಡಿ.17ಕ್ಕೆ ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಹಾಗೂ ಸಮತಾ ಸೈನಿಕ ದಳದಿಂದ ಸುವರ್ಣ ಸೌಧ ಚಲೋ ಹಾಗೂ ಬೆಳಗಾವಿ ಭೀಮಶಕ್ತಿ ಅಧಿವೇಶನವನ್ನು ಏರ್ಪಡಿಸಿರುವುದಾಗಿ ಎಸ್‌ಎಸ್‌ಡಿ ವಿದ್ಯಾರ್ಥಿ ಘಟಕದ ಡಾ.ಜಿ.ಗೋವಿಂದಯ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಹತ್ತು ಹಲವು ಸಮಸ್ಯೆಗಳು ನಾಡಿನ ದಲಿತ ಜನಾಂಗವನ್ನು ಕಾಡುತ್ತಿದ್ದರೂ ರಾಜ್ಯ ಸರಕಾರವು ಕಳೆದ ಆರು ತಿಂಗಳ ಆಡಳಿತದಲ್ಲಿ ದಲಿತಪರವಾಗಿ ನಡೆದುಕೊಂಡಿಲ್ಲ. ಅಲ್ಲದೆ, ಎಸ್ಸಿ-ಎಸ್ಟಿ ಆಯೋಗಕ್ಕೆ ಅಧ್ಯಕ್ಷರನ್ನು ನೇಮಕ ಮಾಡದೆ ಸಾವಿರಾರು ಪ್ರಕರಣಗಳಿಗೆ ನ್ಯಾಯವೇ ಸಿಗದಂತೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಎಸ್ಸಿ-ಎಸ್ಟಿ ಹಾಸ್ಟೆಲ್‌ಗಳ ಅವ್ಯವಸ್ಥೆಯು ಇಂದಿಗೂ ಹಾಗೆಯೇ ಮುಂದುವರಿದು ಹಾಸ್ಟೆಲ್ ವಿದ್ಯಾರ್ಥಿಗಳೆಲ್ಲರೂ ಉತ್ತಮ ವಿದ್ಯಾಭ್ಯಾಸ ಮತ್ತು ವಾಸದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಕೆಲವು ಹಾಸ್ಟೆಲ್‌ಗಳಂತೂ ಹಂದಿಗೂಡು, ಕುರಿದೊಡ್ಡಿಗಳಿಗಿಂತ ಕಡೆಯಾಗಿವೆ ಎಂದು ನುಡಿದರು.

ಹಾಗೂ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಯಾಗಬೇಕೆಂಬ ರಾಜ್ಯ ದಲಿತ ಸಂಘಟನೆಗಳ ಒಕ್ಕೊರಲಿನ ಬೇಡಿಕೆಯನ್ನು ರಾಜ್ಯ ಸರಕಾರವು ಗಂಭೀರವಾಗಿ ಪರಿಗಣಿಸದೆ ಅಹಿಂದ ವರ್ಗಗಳ ವಿರೋಧಿಯಾಗಿದೆ. ಎಸ್ಸಿ-ಎಸ್ಟಿ ನೌಕರರಿಗೆ ಹಿಂಭಡ್ತಿ ಅನ್ಯಾಯ, ಪಿಟಿಸಿಎಲ್ ಕಾಯ್ದೆಯ ಅನ್ಯಾಯ, ಬ್ಯಾಕ್ ಲಾಗ್ ಹುದ್ದೆ ದ್ರೋಹ, ಹೊರ ಗುತ್ತಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News