ನೋಟು ನಿಷೇಧ ಬೆಂಬಲಿಸಿದ್ದ ಅಧಿಕಾರಿಯ ಆಯ್ಕೆಯಿಂದ ಆರ್‌ಬಿಐ ನಾಶ

Update: 2018-12-12 17:39 GMT

ಹೊಸದಿಲ್ಲಿ,ಡಿ.12: ಶಕ್ತಿಕಾಂತ ದಾಸ್ ಅವರನ್ನು ಆರ್‌ಬಿಐ ಗವರ್ನರ್ ಆಗಿ ನೇಮಕಗೊಳಿಸಿರುವುದಕ್ಕೆ ಬುಧವಾರ ಕೇಂದ್ರದ ವಿರುದ್ಧ ತೀವ್ರ ದಾಳಿಯನ್ನು ನಡೆಸಿರುವ ಕಾಂಗ್ರೆಸ್,ಅವರು ಸರಕಾರದ ತಾಳಕ್ಕೆ ತಕ್ಕಂತೆ ಕುಣಿಯಲಿದ್ದಾರೆ ಎಂದು ಆರೋಪಿಸಿದೆ. ಪ್ರತಿಷ್ಠಿತ ಆರ್ಥಿಕ ತಜ್ಞರ ಬದಲು ನೋಟು ನಿಷೇಧವನ್ನು ಬೆಂಬಲಿಸಿದ್ದ ಅಧಿಕಾರಿಯನ್ನು ಆಯ್ಕೆ ಮಾಡಿರುವುದು ಆರ್‌ಬಿಐ ಅನ್ನು ನಾಶಗೊಳಿಸಲಿದೆ ಎಂದೂ ಅದು ಟೀಕಿಸಿದೆ.

ದಾಸ್ ಅವರು 2016ರಲ್ಲಿ ನೋಟು ನಿಷೇಧ ಕ್ರಮವನ್ನು ಬೆಂಬಲಿಸಿದ್ದಕ್ಕಾಗಿ ಪ್ರಮುಖ ಹುದ್ದೆಗೆ ನೇಮಕಗೊಂಡಿರುವ ಎರಡನೇ ವ್ಯಕ್ತಿಯಾಗಿದ್ದಾರೆ ಮತ್ತು ಇದು ಸಾಮಾನ್ಯ ಜನರೆಡೆಗೆ ಸರಕಾರದ ಸಂವೇದನಾಶೂನ್ಯತೆಯನ್ನು ತೋರಿಸುತ್ತದೆ ಎಂದು ಮಾಜಿ ವಿತ್ತಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ಹೇಳಿದ್ದಾರೆ. ಇತ್ತೀಚಿಗೆ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರನ್ನು ಮುಖ್ಯ ಆರ್ಥಿಕ ಸಲಹೆಗಾರರನ್ನಾಗಿ ನೇಮಕಗೊಳಿಸಿರುವುದು ಇಂತಹ ಮೊದಲ ಪ್ರಕರಣವಾಗಿದೆ ಎಂದು ಅವರು ಪರೋಕ್ಷವಾಗಿ ಸೂಚಿಸಿದ್ದಾರೆ.

ನೋಟು ನಿಷೇಧವನ್ನು ಬೆಂಬಲಿಸಿದ್ದ ಇಬ್ಬರು ವ್ಯಕ್ತಿಗಳನ್ನು ಎರಡು ಪ್ರಮುಖ ಹುದ್ದೆಗಳಿಗೆ ಸರಕಾರವು ನೇಮಕಗೊಳಿಸಿದೆ. ಇದು ಮೋದಿ ಸರಕಾರದ ಬಗ್ಗೆ ಏನನ್ನು ಸೂಚಿಸುತ್ತಿದೆ?, ನೀವು ಏನು ಭಾವಿಸುತ್ತೀರಿ ಎನ್ನುವುದು ನಮಗೆ ಬೇಕಿಲ್ಲ,ನಾವು ನಮಗೆ ಇಷ್ಟವಾದದ್ದನ್ನೇ ಮಾಡುತ್ತೇವೆ ಎಂದು ಸರಕಾರವು ಈ ದೇಶದ ಜನರಿಗೆ ಹೇಳುತ್ತಿದೆಯೇ ಎಂದು ಚಿದಂಬರಂ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಇನ್ನೋರ್ವ ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರೂ ದಾಸ್ ನೇಮಕಕ್ಕಾಗಿ ಸರಕಾರವನ್ನು ತರಾಟೆಗೆತ್ತಿಕೊಂಡಿದ್ದಾರೆ. ದಾಸ್ ಸರಕಾರದ ತಾಳಕ್ಕೆ ತಕ್ಕಂತೆ ಕುಣಿಯಲಿದ್ದಾರೆ ಎಂದಿದ್ದಾರೆ.

ದಾಸ್ ಅವರು ಆರ್‌ಬಿಐನ ನೂತನ ಗವರ್ನರ್ ಆಗಿ ನೇಮಕಗೊಂಡಿದ್ದಾರೆ, ಅವರು ಓರ್ವ ಅಧಿಕಾರಿಯೇ ಹೊರತು ಅರ್ಥಶಾಸ್ತ್ರಜ್ಞರಲ್ಲ. ಅವರು ನೋಟು ನಿಷೇಧವನ್ನು ಸಮರ್ಥಿಸಿಕೊಂಡಿದ್ದರು. ಕಿಂದರಿ ಜೋಗಿಯ ನಾದಕ್ಕೆ ಆರ್‌ಬಿಐ ತಲೆದೂಗಲಿದೆ. ಆರ್‌ಬಿಐನ ಮೀಸಲು ನಿಧಿಯನ್ನು ಸರಕಾರವು ಬಳಸಿಕೊಳ್ಳುವುದನ್ನು ತಪ್ಪಿಸಲು ಇನ್ನು ಸಾಧ್ಯವಿಲ್ಲ. ಇನ್ನೊಂದು ಸಂಸ್ಥೆಯು ನಾಶಗೊಳ್ಳಲಿದೆ ಎಂದು ಅವರು ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News