ಮಧ್ಯಪ್ರದೇಶ, ರಾಜಸ್ಥಾನದ ನೂತನ ಸಿಎಂ ಆಯ್ಕೆ ಗೊಂದಲಕ್ಕೆ ತೆರೆ

Update: 2018-12-13 04:21 GMT

ಹೊಸದಿಲ್ಲಿ, ಡಿ.13: ಹಿರಿಯ ಕಾಂಗ್ರೆಸ್ ಮುಖಂಡ ಕಮಲ್‌ನಾಥ್ ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ. ಎಲ್ಲ ನೂತನ ಶಾಸಕರ ಸಲಹೆ ಪಡೆದ ಬಳಿಕ ಪಕ್ಷದ ವೀಕ್ಷಕರು, ಕಮಲ್‌ನಾಥ್ ಅವರನ್ನೇ ಸಿಎಂ ಗಾದಿಗೆ ಏರಿಸುವ ನಿರ್ಧಾರಕ್ಕೆ ಬಂದಿದ್ದಾರೆ. ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಚಿನ್ ಪೈಲಟ್ ಅವರನ್ನು ಮೀರಿಸಿ, ಸಂಭಾವ್ಯ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ.

ಮಧ್ಯಪ್ರದೇಶದ ಚುನಾವಣಾ ಫಲಿತಾಂಶದ ಅಂತಿಮ ಬಲಾಬಲವನ್ನು ಬುಧವಾರ ಅಧಿಕೃತವಾಗಿ ಘೋಷಿಸಲಾಗಿದ್ದು, ಸರಳ ಬಹುಮತ ಗಳಿಸಲು ಕಾಂಗ್ರೆಸ್‌ಗೆ ಎರಡು ಸ್ಥಾನಗಳ ಕೊರತೆ ಇದೆ. ಆದರೆ ಬಿಎಸ್ಪಿಯ ಮೂವರು, ಸಮಾಜವಾದಿ ಪಕ್ಷದ ಒಬ್ಬರು ಹಾಗೂ ನಾಲ್ವರು ಪಕ್ಷೇತರರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಘೋಷಿಸಿದ್ದಾರೆ.

ಮಧ್ಯಪ್ರದೇಶ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಕಮಲ್‌ನಾಥ್ ಹಾಗೂ ಯುವ ಮುಖಂಡ ಜ್ಯೋತಿರಾದಿತ್ಯ ಸಿಂಧ್ಯಾ ನಡುವೆ ಸಿಎಂ ಗಾದಿಗೆ ತೀವ್ರ ಪೈಪೋಟಿ ಇತ್ತು. ಆದರೆ ಅಂತಿಮವಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕಮಲ್‌ನಾಥ್ ಅವರತ್ತ ಒಲವು ತೋರಿದ್ದು, ಅಂತಿಮ ಘೋಷಣೆಯನ್ನು ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಗುರುವಾರ ಮಾಡುವ ನಿರೀಕ್ಷೆ ಇದೆ.

ರಾಜ್ಯದ ಸಿಎಂ ಯಾರಾಗಬೇಕು ಎಂಬ ಪ್ರಶ್ನೆಯನ್ನು ಕೇಳಿ ರಾಹುಲ್‌ ಗಾಂಧಿ ಪಕ್ಷದ 7 ಲಕ್ಷ ಕಾರ್ಯಕರ್ತರಿಗೆ ಶಕ್ತಿ ಆ್ಯಪ್ ಮೂಲಕ ಕಳುಹಿಸಿದ್ದರು. ಇದಕ್ಕೆ ಕಾರ್ಯಕರ್ತರು ರಹಸ್ಯವಾಗಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ. ಮಾಜಿ ಸಿಎಂ ದಿಗ್ವಿಜಯ ಸಿಂಗ್, ಸಿಂಧ್ಯಾ ಹಾಗೂ ವಿವೇಕ್ ಠಾಂಕಾ ಅವರು ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು.

ಮೂರು ರಾಜ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದ ಕಾಂಗ್ರೆಸ್ ಪಕ್ಷ ಭೋಪಾಲ್, ಜೈಪುರ ಹಾಗೂ ರಾಯಪುರದಲ್ಲಿ ಪಕ್ಷದ ವೀಕ್ಷಕರ ಸಮ್ಮುಖದಲ್ಲಿ ಹೊಸ ಶಾಸಕರ ಅಭಿಪ್ರಾಯ ಪಡೆದಿತ್ತು. ಆದರೆ ಶಾಸಕರು ಸಿಎಂ ಆಯ್ಕೆ ಕುರಿತ ಅಂತಿಮ ನಿರ್ಧಾರವನ್ನು ರಾಹುಲ್ ವಿವೇಚನೆಗೆ ಬಿಟ್ಟಿದ್ದರು.

ರಾಜಸ್ಥಾನದಲ್ಲಿ ಹಿರಿಯ ರಾಜಕಾರಣಿ ವಸುಂಧರರಾಜೇ ನೇತೃತ್ವದ ಬಿಜೆಪಿಯನ್ನು ಹಣಿಯಲು ಗೆಹ್ಲೋಟ್ ಅವರೇ ಸೂಕ್ತ ಎಂಬ ಅಭಿಪ್ರಾಯಕ್ಕೆ ಪಕ್ಷದ ವರಿಷ್ಠರು ಬಂದಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News