ಪಂಚರಾಜ್ಯಗಳಲ್ಲಿ ಬಿಜೆಪಿ ಸೋಲಿನ ಬಗ್ಗೆ ಕೊನೆಗೂ ಪ್ರತಿಕ್ರಿಯಿಸಿದ ಆದಿತ್ಯನಾಥ್

Update: 2018-12-13 07:18 GMT

ಪಾಟ್ನಾ, ಡಿ.13: “ಕಾಂಗ್ರೆಸ್ ವಂಚನೆಯ ಮೂಲಕ ವಿಧಾನಸಭಾ ಚುನಾವಣೆಗಳಲ್ಲಿ ಜಯ ಸಾಧಿಸಿದೆ'' ಎಂದು ಮಧ್ಯ ಪ್ರದೇಶ, ಛತ್ತೀಸ್ ಗಢ ಹಾಗೂ ರಾಜಸ್ಥಾನಗಳಲ್ಲಿ ತಮ್ಮ ಪಕ್ಷದ ಸರಕಾರಗಳು ಸೋಲುಂಡ ಮರುದಿನ ಬಿಜೆಪಿಯ ತಾರಾ ಪ್ರಚಾರಕ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಪ್ರತಿಕ್ರಿಯಿಸಿದ್ದಾರೆ.

ನೇಪಾಳದ ಜನಕಪುರದ ಜಾನಕಿ ದೇವಳದಲ್ಲಿ ವಿವಾಹ ಪಂಚಮಿ ಆಚರಣೆಯಲ್ಲಿ ಪಾಲ್ಗೊಂಡು ವಾಪಸಾಗುವ ಹಾದಿಯಲ್ಲಿ ಪಾಟ್ನಾದ ಮಹಾವೀರ ದೇವಳಕ್ಕೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರ ಜತೆ ಆದಿತ್ಯನಾಥ್ ಮಾತನಾಡಿದರು.

``ಕಾಂಗ್ರೆಸ್ ಪಕ್ಷದ ಸುಳ್ಳುಗಳು ಸದ್ಯವೇ ಅನಾವರಣಗೊಳ್ಳಲಿವೆ, ಇದು ನಮ್ಮ ಭವಿಷ್ಯದ ಹೋರಾಟಗಳನ್ನು ಇನ್ನಷ್ಟು ಸುಲಭವಾಗಿಸುವುದು,'' ಎಂದು ಕಾಂಗ್ರೆಸ್ ಪಕ್ಷದ ವಿಜಯವನ್ನು ಗೌಣವಾಗಿಸುವ ರೀತಿಯಲ್ಲಿ ಅವರು ಹೇಳಿದರು.

``ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಸೋಲು, ಗೆಲುವು ಸಹಜ ಹಾಗೂ ಅವುಗಳನ್ನು ವಿನಮ್ರತೆಯಿಂದ ಸ್ವೀಕರಿಸಬೇಕು,'' ಎಂದ ಆದಿತ್ಯನಾಥ್ ``ನಾವು ವಿಜಯ ಗಳಿಸಿದಾಗ ಅನಗತ್ಯವಾಗಿ ಹಿಗ್ಗುವುದಿಲ್ಲ ಹಾಗೂ ನಮ್ಮ ಸೋಲುಗಳಿಗೆ ಇವಿಎಂಗಳನ್ನು ನಮ್ಮ ವಿರೋಧಿಗಳಂತೆ ದೂರುವುದಿಲ್ಲ'' ಎಂದು ಹೇಳಿದರು.``ವಿಪಕ್ಷಗಳು ಈ ನಿಟ್ಟಿನಲ್ಲಿ ಇಬ್ಬಗೆ ನೀತಿ ಅನುಸರಿಸುತ್ತವೆ, ಗೆದ್ದಾಗ ಅವರು ಇವಿಎಂಗಳನ್ನು ಆರಾಧಿಸಲು ಆರಂಭಿಸುತ್ತಾರೆ,'' ಎಂದರು.

ಚುನಾವಣಾ ಪ್ರಚಾರದ ವೇಳೆ ಹನುಮಾನ್ ದೇವರ ಜಾತಿಯ ಬಗ್ಗೆ ಪ್ರತಿಕ್ರಿಯಿಸಿದ್ದು ಮತದಾರರ ಆಕ್ರೋಶಕ್ಕೆ ಕಾರಣವಾಗಿದೆ ಎಂಬ  ದೂರುಗಳಿಗೆ ಪ್ರತಿಕ್ರಿಯಿಸಿದ ಆದಿತ್ಯನಾಥ್, “ನಾನು ಬಜರಂಗ್ ಬಲಿಯ ಜಾತಿಯ ಬಗ್ಗೆ ಹೇಳಿಲ್ಲ. ಹನುಮಾನ್ ಆಧ್ಯಾತ್ಮಿಕತೆಯಲ್ಲಿ ನೆಲೆಸುತ್ತಾನೆ ಹಾಗೂ ಆಧ್ಯಾತ್ಮಿಕತೆ ಎಲ್ಲಾ ಜಾತಿಯ ಜನರಲ್ಲೂ ಇದೆ ಎಂದಷ್ಟೇ ತಾನು ಹೇಳಿದ್ದೆ'' ಎಂದು ಅವರು ಹೇಳಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News