ಗೋವು ರಾಷ್ಟ್ರಮಾತೆ: ಹಿಮಾಚಲಯದಲ್ಲಿ ನಿರ್ಣಯ ಮಂಡಿಸಿದ ಪಕ್ಷ ಯಾವುದು ಗೊತ್ತೇ ?

Update: 2018-12-14 03:54 GMT

ಧರ್ಮಶಾಲಾ, ಡಿ. 14: ಗೋವನ್ನು ರಾಷ್ಟ್ರಮಾತೆ ಎಂದು ಘೋಷಿಸುವ ನಿರ್ಣಯವನ್ನು ಹಿಮಾಚಲ ಪ್ರದೇಶ ವಿಧಾನಸಭೆ ಗುರುವಾರ ಆಂಗೀಕರಿಸಿದೆ. ಬಿಜೆಪಿ ಆಡಳಿತದ ಉತ್ತರಾಖಂಡ ಸರ್ಕಾರ ಕಳೆದ ಸೆಪ್ಟೆಂಬರ್‌ನಲ್ಲಿ ಗೋವನ್ನು ರಾಷ್ಟ್ರಮಾತೆ ಎಂದು ಘೋಷಿಸುವ ಮೂಲಕ ಈ ಘೋಷಣೆ ಮಾಡಿದ ಮೊದಲ ರಾಜ್ಯ ಎನಿಸಿಕೊಂಡಿತ್ತು.

ಕಾಂಗ್ರೆಸ್ ಶಾಸಕ ಅನಿರುದ್ಧ್ ಸಿಂಗ್ ಮಂಡಿಸಿದ ಈ ನಿರ್ಣಯಕ್ಕೆ ಆಡಳಿತಾರೂಢ ಬಿಜೆಪಿ ಶಾಸಕರು ಬೆಂಬಲ ನೀಡಿದರು. "ಗೋವು ಯಾವುದೇ ಜಾತಿ, ಜನಾಂಗ ಅಥವಾ ಧರ್ಮಕ್ಕೆ ಸೇರಿದ ಸೊತ್ತಲ್ಲ. ಇದು ಮನುಕುಲಕ್ಕೆ ಅಪಾರ ಕೊಡುಗೆ ನೀಡಿದೆ. ಹಸು ಹಾಲು ನೀಡುವುದು ನಿಲ್ಲಿಸಿದಾಗ ಜನ ಅದನ್ನು ಬೀದಿಪಾಲು ಮಾಡುತ್ತಾರೆ. ಆದ್ದರಿಂದ ಈ ನಿರ್ಣಯ ಕೈಗೊಳ್ಳುವುದು ಅಗತ್ಯವಾಗಿತ್ತು" ಎಂದು ಸಿಂಗ್ ವಿವರಿಸಿದರು.

ಗೋಸಂರಕ್ಷಣೆ ಹೆಸರಿನಲ್ಲಿ ನಡೆಯುವ ಪುಂಡಾಟಿಕೆ ಮತ್ತು ದಾಳಿಯಂಥ ಘಟನೆಗಳನ್ನು ತಡೆಯಲು ಪ್ರಬಲ ಕಾನೂನು ಜಾರಿಗೆ ತರುವ ಅಗತ್ಯವನ್ನೂ ಅವರು ಪ್ರತಿಪಾದಿಸಿದ್ದಾರೆ. 2015ರ ಅಕ್ಟೋಬರ್ 16ರಂದು ಉತ್ತರ ಪ್ರದೇಶ ಮೂಲದ ವ್ಯಕ್ತಿಯನ್ನು ಗೋರಕ್ಷಕರ ಗುಂಪು ಹತ್ಯೆ ಮಾಡಿದ ಘಟನೆ ರಾಜ್ಯದಲ್ಲಿ ತಲ್ಲಣ ಮೂಡಿಸಿತ್ತು.

ಗೋಸಂರಕ್ಷಣೆಗಾಗಿ ರಾಜ್ಯ ಸರ್ಕಾರ ಹಲವು ಧಾಮಗಳನ್ನು ನಿರ್ಮಿಸಲು ಸರ್ಕಾರ ಉದ್ದೇಶಿಸಿದೆ ಎಂದು ಪಶು ಸಂಗೋಪನೆ ಖಾತೆ ಸಚಿವ ವೀರೇಂದ್ರ ಕನ್ವರ್ ಹೇಳಿದರು. ಸಿಮ್ರಾವೂರ್ ಜಿಲ್ಲೆಯಲ್ಲಿ ಇಂಥ ಗೋಧಾಮ ಸ್ಥಾಪನೆಗೆ 1.52 ಕೋಟಿ ರೂ. ಮಂಜೂರು ಮಾಡಲಾಗಿದೆ. ಸೋಲನ್ ಮತ್ತು ಕಾಂಗ್ರಾ ಜಿಲ್ಲೆಗಳಲ್ಲೂ ಇಂಥ ಧಾಮಗಳನ್ನು ಸ್ಥಾಪಿಸುವುದಾಗಿ ಅವರು ಭರವಸೆ ನೀಡಿದರು.

ದೇಸಿ ತಳಿಯ ಸ್ಥಳೀಯ ಹಸುಗಳನ್ನು ಉಳಿಸಿ ಬೆಳೆಸಲು ಉತ್ತೇಜನ ನೀಡುವಂತೆಯೂ ಶಾಸಕರು ಸರ್ಕಾರವನ್ನು ಒತ್ತಾಯಿಸಿದರು. ಹಿಮಾಚಲ ಪ್ರದೇಶದ ಸ್ಥಳೀಯ ತಳಿಗೆ "ಗೌರಿ" ಎಂದು ಮರುನಾಮಕರಣ ಮಾಡಲಾಗಿದೆ. ಈ ಹೊಸ ಹೆಸರಿಗೆ ಅನುಮೋದನೆ ನೀಡುವಂತೆ ರಾಜ್ಯ ಸರ್ಕಾರ ನ್ಯಾಷನಲ್ ಬ್ಯೂರೊ ಆಫ್ ಅನಿಲಮ್ ಜನೆಟಿಕ್ ರಿಸೋರ್ಸ್‌ಗೆ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News