ನೇಪಾಳದಲ್ಲಿ ಭಾರತದ ಗರಿಷ್ಠ ಮುಖಬೆಲೆಯ ಕರೆನ್ಸಿ ನೋಟುಗಳ ಬಳಕೆಗೆ ನಿಷೇಧ

Update: 2018-12-14 05:11 GMT

 ಕಠ್ಮಂಡು, ಡಿ.14: ನೇಪಾಳ ಸರಕಾರ ಭಾರತದ 2,000, 500 ಹಾಗೂ 200 ರೂ. ಮುಖ ಬೆಲೆಯ ಗರಿಷ್ಠ ವೌಲ್ಯದ ಕರೆನ್ಸಿ ನೋಟುಗಳ ಬಳಕೆಗೆ ನಿಷೇಧ ವಿಧಿಸಲು ನಿರ್ಧರಿಸಿದ್ದು, ಇನ್ನು ಮುಂದೆ ಭಾರತದ 100 ರೂ. ಬೆಲೆಯ ನೋಟುಗಳನ್ನು ಮಾತ್ರ ಬಳಸಬೇಕು ಎಂದು ದೇಶದ ಜನರಲ್ಲಿ ವಿನಂತಿಸಿದೆ.

ನೇಪಾಳದ ಸರಕಾರದ ವಕ್ತಾರ ಹಾಗೂ ಮಾಹಿತಿ ಹಾಗೂ ಸಂಪರ್ಕ ಸಚಿವ ಗೋಕುಲ್ ಪ್ರಸಾದ್ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ನೇಪಾಳದ ಸರಕಾರದ ಈ ನಿರ್ಧಾರದಿಂದಾಗಿ ಭಾರತದಲ್ಲಿ ಕೆಲಸ ಮಾಡುತ್ತಿರುವ ನೇಪಾಳದ ಕಾರ್ಮಿಕರು ಹಾಗೂ ನೇಪಾಳಕ್ಕೆ ಪದೇ ಪದೇ ಭೇಟಿ ನೀಡುವ ಭಾರತದ ಪ್ರವಾಸಿಗರ ಮೇಲೆ ಪ್ರತಿಕೂಲ ಪರಿಣಾಮಬೀರಲಿದೆ.

‘‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ)ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ ಅಡಿ ನೂತನ ಅಧಿಸೂಚನೆ ಹೊರಡಿಸುವ ತನಕ ಭಾರತದ ಹೊಸ ನೋಟುಗಳನ್ನು ವಿನಿಮಯ ಮಾಡಲಾಗುವುದಿಲ್ಲ’’ ಎಂದು ನೇಪಾಳ ರಾಷ್ಟ್ರ ಬ್ಯಾಂಕ್ ತಿಳಿಸಿದೆ. ಆರ್‌ಬಿಐ ಅಧಿಸೂಚನೆಯು ವಿದೇಶ ರಾಷ್ಟ್ರಗಳ ಪ್ರಜೆಗಳು ಭಾರತದ ನಿರ್ದಿಷ್ಟ ಮೊತ್ತದ ಕರೆನ್ಸಿಗಳನ್ನು ಇಟ್ಟುಕೊಳ್ಳಲು ಅವಕಾಶ ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News