ಸಚಿವ ಸಂಪುಟ ವಿಸ್ತರಣೆ: ಹೊಸದಿಲ್ಲಿಗೆ ಬರುವಂತೆ ರಾಜ್ಯ ನಾಯಕರಿಗೆ ರಾಹುಲ್‌ ಗಾಂಧಿ ಕರೆ

Update: 2018-12-14 14:17 GMT

ಬೆಂಗಳೂರು, ಡಿ.14: ರಾಜ್ಯ ಸಮ್ಮಿಶ್ರ ಸರಕಾರದ ಸಚಿವ ಸಂಪುಟವನ್ನು ಡಿ.22ರಂದು ವಿಸ್ತರಣೆ ಮಾಡಲು ಇತ್ತೀಚೆಗೆ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ತೀರ್ಮಾನಿಸಿದ ಬೆನ್ನಲ್ಲೆ, ರಾಜ್ಯ ನಾಯಕರಿಗೆ ಹೊಸದಿಲ್ಲಿಗೆ ಬರುವಂತೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಕರೆ ನೀಡಿದ್ದಾರೆ.

ವಿಧಾನಮಂಡಲದ ಅಧಿವೇಶನ ಡಿ.21ರಂದು ಮುಗಿಯುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಹೊಸದಿಲ್ಲಿಗೆ ತೆರಳಿ, ರಾಹುಲ್‌ ಗಾಂಧಿ ಜೊತೆ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಲಿದ್ದಾರೆ.

ಸಂಪುಟ ವಿಸ್ತರಣೆಗೆ ರಾಹುಲ್‌ ಗಾಂಧಿ ಅನುಮತಿ ನೀಡಿದಲ್ಲಿ, ನಿಗದಿಯಂತೆ ಡಿ.22ರಂದು ಸಂಪುಟ ವಿಸ್ತರಣೆ ಆಗುವ ಸಾಧ್ಯತೆಗಳು ಹೆಚ್ಚಿವೆ. ಐದು ರಾಜ್ಯಗಳ ಚುನಾವಣಾ ಫಲಿತಾಂಶದಿಂದ ಸಾಕಷ್ಟು ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಹೈಕಮಾಂಡ್ ಸಂಪುಟ ವಿಸ್ತರಣೆಗೆ ಅಸ್ತು ಎನ್ನಬಹುದು ಎಂಬ ನಿರೀಕ್ಷೆ ಸಚಿವ ಸ್ಥಾನ ಆಕಾಂಕ್ಷಿಗಳಲ್ಲಿ ಹೆಚ್ಚಿದೆ.

ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಸಂಪುಟ ವಿಸ್ತರಣೆ ಹಲವಾರು ಕಾರಣಗಳಿಂದ ಮುಂದೂಡಲ್ಪಡುತ್ತಿದೆ. ಇದರಿಂದ ಬೇಸತ್ತಿರುವ ಕಾಂಗ್ರೆಸ್ ಶಾಸಕರು, ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದರು. ಅಲ್ಲದೆ, ಬಂಡಾಯದ ಸೂಚನೆಯನ್ನು ನೀಡಿದ್ದರು. ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಅಧಿವೇಶನ ಮುಗಿದ ಬಳಿಕ ಸಂಪುಟ ವಿಸ್ತರಣೆ ಹಾಗೂ ನಿಗಮ, ಮಂಡಳಿಗಳ ನೇಮಕಾತಿ ನಡೆಯುವುದು ಖಚಿತ ಎಂದು ನಾಯಕರು ಭರವಸೆ ನೀಡಿದ್ದರು.

ಕೆಲವು ಮುಖಂಡರು ಆತುರವಾಗಿ ಸಂಪುಟ ವಿಸ್ತರಣೆ ಮಾಡುವುದು ಬೇಡ. ಲೋಕಸಭೆ ಚುನಾವಣೆ ಮುಗಿದ ಬಳಿಕ, ಸಂಪುಟದಲ್ಲಿರುವ ನಿಷ್ಕ್ರಿಯ ಸಚಿವರನ್ನು ಕೈ ಬಿಟ್ಟು, ಹೆಚ್ಚಿನ ಶಾಸಕರಿಗೆ ಸಂಪುಟದಲ್ಲಿ ಅವಕಾಶ ನೀಡುವುದು ಸೂಕ್ತ ಎಂಬ ಸಲಹೆಯನ್ನು ವರಿಷ್ಠರ ಮುಂದೆ ಇಟ್ಟಿದ್ದರು. ಆದರೆ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಡ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ದಾಖಲಿಸಿರುವ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಹೈಕಮಾಂಡ್ ತಾನಾಗಿಯೇ, ರಾಜ್ಯ ನಾಯಕರಿಗೆ ಸಚಿವ ಸಂಪುಟ ಆಕಾಂಕ್ಷಿಗಳ ಪಟ್ಟಿಯೊಂದಿಗೆ ಹೊಸದಿಲ್ಲಿಗೆ ಬರುವಂತೆ ಸೂಚಿಸಿರುವುದು ಶಾಸಕರಲ್ಲಿ ಹೊಸ ಚೈತನ್ಯ ಮೂಡುವಂತೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News