ರಫೇಲ್ ಹಗರಣ: ಮೋದಿಯ ನಿಷ್ಠೆ ಯಾರಿಗೆ?

Update: 2018-12-15 04:48 GMT

ಬೃಹತ್ ಹಗರಣವೊಂದರ ತನಿಖೆಯನ್ನು ನಡೆಯದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದುದನ್ನೇ ‘ತನಗೆ ಸಿಕ್ಕಿದ ಕ್ಲೀನ್ ಚಿಟ್’ ಎಂದು ಪ್ರಧಾನಿ ಮೋದಿ ಮತ್ತು ಅವರ ಪರಿವಾರ ಭಾವಿಸಿದಂತಿದೆ. ರಫೇಲ್ ಹಗರಣ ಒಪ್ಪಂದದ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕೆಂಬ ಬೇಡಿಕೆಯನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿದೆ. ಅಂದರೆ ಪ್ರಕರಣದಲ್ಲಿ ತಾನು ಮಧ್ಯೆ ಪ್ರವೇಶಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿಕೊಂಡಿದೆ. ಈ ಮೂಲಕ ತನ್ನ ಮಿತಿಯನ್ನು ಸ್ಪಷ್ಟಪಡಿಸಿದೆ. ಹಗರಣದ ಕುರಿತಂತೆ ಯಾವುದೇ ತನಿಖೆ ನಡೆಸಿ ತನ್ನ ತೀರ್ಪನ್ನು ನ್ಯಾಯಾಲಯ ನೀಡಿಲ್ಲ. ಎಂದಿನಂತೆಯೇ ಮೋದಿ ಬಳಗ, ಜನರನ್ನು ಮೂರ್ಖರನ್ನಾಗಿಸಲು ಹೊರಟಿದೆ. ನ್ಯಾಯಾಲಯದ ಸಮಜಾಯಿಷಿಯನ್ನೇ ‘ರಫೇಲ್‌ನಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ’ ಎಂದು ಮಾಧ್ಯಮಗಳ ಮೂಲಕ ಜನರನ್ನು ನಂಬಿಸಲು ಹೊರಟಿದೆ.

ರಫೇಲ್ ಹಗರಣವು ಬೊಫೋರ್ಸ್‌ ಹಗರಣಕ್ಕಿಂತ ಹಲವು ಪಟ್ಟು ದೊಡ್ಡದು ಎನ್ನುವುದನ್ನು ವಿರೋಧ ಪಕ್ಷಗಳು ಮಾತ್ರವಲ್ಲ, ಸ್ವತಃ ಬಿಜೆಪಿಯೊಳಗಿರುವ ನಾಯಕರೇ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದಾರೆ. ರಫೇಲ್ ಹಗರಣ ಈ ದೇಶದ ಭದ್ರತೆಗೆ ಸಂಬಂಧಿಸಿರುವುದು. ಕಡಿಮೆ ವಿಮಾನಗಳನ್ನು ಅತಿ ಹೆಚ್ಚು ಬೆಲೆಗೆ ಕೊಂಡುಕೊಂಡಿರುವುದು ಮಾತ್ರವಲ್ಲ, ಈ ದೇಶದ ರಕ್ಷಣಾ ವಲಯದಲ್ಲಿ ಅಪಾರ ಕೊಡುಗೆಗಳನ್ನು ನೀಡುತ್ತಾ ಬಂದಿದ್ದ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿ. ನ ಬುಡಕ್ಕೆ ಕೊಡಲಿಯಿಟ್ಟು ರಿಲಯನ್ಸ್‌ನಂತಹ ಸಂಸ್ಥೆಯನ್ನು ಮೇಲೆತ್ತುವ ಹುನ್ನಾರ ನಡೆದಿದೆ. ಮೋದಿಯ ಆಪ್ತಮಿತ್ರ ಎಂದೇ ಗುರುತಿಸಿಕೊಂಡಿರುವ ಅಂಬಾನಿ ಬಳಗಕ್ಕೆ ಲಾಭ ಮಾಡಿಕೊಡುವ ದೃಷ್ಟಿಯಿಂದ ದೇಶದ ರಕ್ಷಣಾ ಹಿತಾಸಕ್ತಿಯನ್ನು ಬಲಿಕೊಟ್ಟ ಆರೋಪವನ್ನು ಮೋದಿಯವರು ಎದುರಿಸುತ್ತಿದ್ದಾರೆ. ಜೊತೆಗೆ ರಫೇಲ್ ಒಪ್ಪಂದಕ್ಕೆ ರಿಲಯನ್ಸ್‌ನ್ನು ಪಾಲುದಾರನನ್ನಾಗಿಸಿದ್ದು ತಾನಲ್ಲ, ಫ್ರಾನ್ಸ್‌ನ ಡಸ್ಸಾಲ್ಟ್ ಏವಿಯೇಶನ್ ಎಂಬ ಮೋದಿ ಸರಕಾರದ ಹೇಳಿಕೆಯೂ ಫ್ರಾನ್ಸ್‌ನ ಮಾಜಿ ಅಧ್ಯಕ್ಷರ ಸ್ಪಷ್ಟನೆಯಿಂದ ಕಸದ ಬುಟ್ಟಿಗೆ ಸೇರಿದೆ.

ರಿಲಯನ್ಸ್ ಕಂಪೆನಿಯನ್ನು ರಫೇಲ್ ಒಪ್ಪಂದದ ಭಾರತೀಯ ಪಾಲುದಾರನನ್ನಾಗಿ ನಿಯೋಜಿಸುವಂತೆ ಭಾರತ ಸರಕಾರವೇ ಸೂಚನೆಯನ್ನು ನೀಡಿತ್ತು ಎಂದು ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಒಲಾಂಡ್ ಅವರು ಹೇಳಿದ್ದರು. ಇಷ್ಟಾದ ಬಳಿಕವೂ ನರೇಂದ್ರ ಮೋದಿ ಸರಕಾರ, ಈ ಬಗ್ಗೆ ತನಿಖೆ ನಡೆಸಲು ಅವಕಾಶ ನೀಡಲಿಲ್ಲ. ಒಂದು ಲಕ್ಷ ಕೋಟಿ ರೂಪಾಯಿಯ ರಫೇಲ್ ಒಪ್ಪಂದಕ್ಕೆ ಹೋಲಿಸಿದರೆ ಬೊಫೋರ್ಸ್ ಹಗರಣ ಏನೂ ಅಲ್ಲ. ಪ್ರಧಾನಿಯವರು ಎಲ್ಲಾ ರೀತಿಯ ನಿಯಮ ಹಾಗೂ ಕಾನೂನುಗಳನ್ನು ಉಲ್ಲಂಘಿಸಿ ಓರ್ವ ನಿರ್ದಿಷ್ಟ ಉದ್ಯಮಿಯ ಪ್ರಯೋಜನಕ್ಕಾಗಿ ದೇಶದ ಬೊಕ್ಕಸವನ್ನು ಕೊಳ್ಳೆಹೊಡೆಯಲು ಅವಕಾಶ ಮಾಡಿಕೊಟ್ಟಿದ್ದಾರೆಂಬ ಗಂಭೀರ ಆರೋಪವನ್ನು ಪ್ರತಿಪಕ್ಷಗಳು ಮಾಡುತ್ತಿವೆ. ಈ ಇಡೀ ಹಗರಣಕ್ಕೆ ಸಂಬಂಧಿಸಿ ಮೋದಿ ಸರಕಾರವು ವ್ಯತಿರಿಕ್ತವಾದ ಹೇಳಿಕೆಗಳನ್ನು ನೀಡುತ್ತಿದೆ ಹಾಗೂ ಸಂಸತ್ತನ್ನು ತಪ್ಪುದಾರಿಗೆಳೆಯುತ್ತಿದೆ. ಒಂದು ಹಂತದಲ್ಲಿ, ಈ ಒಪ್ಪಂದದ ಹಿಂದಿರುವುದು ಹಿಂದಿನ ಯುಪಿಎ ಸರಕಾರ ಎಂಬ ಹೇಳಿಕೆಯನ್ನು ನೀಡಿ ಜಾರಿಕೊಳ್ಳಲು ಯತ್ನಿಸಿತ್ತು.

ಹಿಂದಿನ ಯುಪಿಎ ಸರಕಾರವು, ದೇಶದ ವಾಯುಪಡೆಯನ್ನು ಬಲಪಡಿಸುವ ಉದ್ದೇಶದೊಂದಿಗೆ, ಫ್ರೆಂಚ್ ಕಂಪೆನಿ ಡಸ್ಸಾಲ್ಟ್‌ನಿಂದ 126 ರಫೇಲ್ ಫೈಟರ್ ಜೆಟ್‌ಗಳನ್ನು ಖರೀದಿಸಲು ಬಯಸಿತ್ತು. ಬೊಫೋರ್ಸ್ ಗನ್ ಹಗರಣದಲ್ಲಿ ಭಾರೀ ಮುಖಭಂಗ ಅನುಭವಿಸಿದ್ದ ಕಾಂಗ್ರೆಸ್ ಸರಕಾರವು, ರಫೇಲ್ ಒಪ್ಪಂದದಲ್ಲಿ ಯಾವುದೇ ಅವ್ಯವಹಾರಗಳು ನಡೆಯದಂತೆ ಭಾರೀ ಎಚ್ಚರಿಕೆ ವಹಿಸಿತ್ತು. ಈ ಹಿನ್ನೆಲೆಯಲ್ಲಿ ಅದು ರಕ್ಷಣಾ ಒಪ್ಪಂದಗಳ ಜಾರಿಗಾಗಿ ರಕ್ಷಣಾ ಸಚಿವಾಲಯ ಹಾಗೂ ಸೇನಾಪಡೆಗಳ ಸಂಬಂಧಪಟ್ಟ ಇಲಾಖೆಗಳ ಸಮಿತಿಗಳನ್ನು ಕೂಡಾ ರಚಿಸಿತ್ತು. ಯಾವುದೇ ರಕ್ಷಣಾ ಒಪ್ಪಂದವನ್ನು ಏರ್ಪಡಿಸಿಕೊಳ್ಳುವ ಮುನ್ನ ಈ ಸಮಿತಿಗಳ ಶಿಫಾರಸು ಪಡೆಯುವುದನ್ನು ಅದು ಕಡ್ಡಾಯಗೊಳಿಸಿತ್ತು. ಈ ವ್ಯವಸ್ಥೆಯಡಿ ಪ್ರತಿಯೊಂದು ರಕ್ಷಣಾ ಒಪ್ಪಂದವು ಹಲವಾರು ಹಂತಗಳಲ್ಲಿ ಪರಿಶೀಲನೆಗೊಳಗಾಗಬೇಕಿತ್ತು. ಯುಪಿಎ ಸರಕಾರವು ಏರ್ಪಡಿಸಿಕೊಂಡ ರಫೇಲ್ ಒಪ್ಪಂದವು ಈ ಎಲ್ಲಾ ಹಂತಗಳನ್ನು ಹಾದುಹೋಗಿತ್ತು. ಈ ಒಪ್ಪಂದದಡಿ ವಾಯುಪಡೆಯ ಆರು ಸ್ಕ್ವಾಡ್ರನ್‌ಗಳಿಗೆ 126 ರಫೇಲ್ ಯುದ್ಧವಿಮಾನಗಳನ್ನು ಖರೀದಿಸಲು ಅಂತಿಮವಾಗಿ ತೀರ್ಮಾನಿಸಲಾಗಿತ್ತು. ಆದರೆ ಮೋದಿ ಸರಕಾರದ ಅವಧಿಯಲ್ಲಿ ಎಲ್ಲವೂ ತಿರುವು ಮುರುವಾಯಿತು. ರಫೇಲ್ ಯುದ್ಧ ವಿಮಾನಗಳನ್ನು ಯೋಗ್ಯದರಗಳಲ್ಲಿ ಖರೀದಿಸುವ ವಿಚಾರವಾಗಿ ಕಾಂಗ್ರೆಸ್ 2012ರಲ್ಲಿ ಸುದೀರ್ಘ ಚರ್ಚೆಗಳನ್ನು ನಡೆಸಿತ್ತು. ಆ ಪ್ರಕಾರ ಪ್ರತಿಯೊಂದು ವಿಮಾನವನ್ನು 670 ಕೋಟಿ ರೂ. ದರದಲ್ಲಿ ಖರೀದಿಸುವುದಾಗಿ ಒಪ್ಪಂದವಾಗಿತ್ತು. ಆ ಪೈಕಿ 18 ಯುದ್ಧ ವಿಮಾನಗಳನ್ನು ನೇರವಾಗಿ ಫ್ರಾನ್ಸ್ ನಿಂದ ತರುವುದಾಗಿಯೂ, ಉಳಿದ 108 ವಿಮಾನಗಳನ್ನು ಫ್ರಾನ್ಸ್‌ನಿಂದ ತರುವ ಬಿಡಿಭಾಗಗಳಿಂದ ಸಾರ್ವಜನಿಕರಂಗದ ಸಂಸ್ಥೆಯಾದ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ನ ಘಟಕಗಳಲ್ಲಿ ಜೋಡಿಸುವುದಾಗಿ ನಿರ್ಧರಿಸಲಾಗಿತ್ತು. ಈ ಮಧ್ಯೆ ಕೇಂದ್ರದಲ್ಲಿ ಸರಕಾರ ಬದಲಾಯಿತು. ನೂತನ ಮೋದಿ ಸರಕಾರವು ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ ಫ್ರಾನ್ಸ್ ಜೊತೆ ಮಾತುಕತೆಗಳನ್ನು ಮುಂದುವರಿಸಿತು.

2015ರಲ್ಲಿ ಡಸ್ಸಾಲ್ಟ್ ಕಂಪೆನಿಯ ಸಿಇಒ ಭಾರತಕ್ಕೆ ಆಗಮಿಸಿ, ಒಪ್ಪಂದಕ್ಕೆ ಸಂಬಂಧಿಸಿ ಮಾತುಕತೆಗಳು ಪೂರ್ಣಗೊಂಡಿವೆ ಹಾಗೂ ವಿಮಾನ ಖರೀದಿ ದರಗಳು ಕೂಡಾ ಅಂತಿಮಗೊಂಡಿವೆ ಎಂದು ತಿಳಿಸಿದ್ದರು. ಆದರೆ, ಓರ್ವ ಬಂಡವಾಳಶಾಹಿ ಉದ್ಯಮಿಯ ಲಾಭಕ್ಕೋಸ್ಕರ ಪ್ರಧಾನಿ ನರೇಂದ್ರ ಮೋದಿ ವಾಯುಪಡೆ ಅಥವಾ ರಕ್ಷಣಾ ಇಲಾಖೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆಯೇ ಕೇವಲ ಎರಡೇ ದಿನಗಳಲ್ಲಿ ಇಡೀ ಒಪ್ಪಂದದ ನಿಯಮಾವಳಿಗಳು ಹಾಗೂ ಷರತ್ತುಗಳನ್ನು ಬುಡಮೇಲು ಮಾಡಿಬಿಟ್ಟರು. ಹಿಂದೂಸ್ಥಾನ್ ಏರೋನಾಟಿಕ್ಸ್ ಒಪ್ಪಂದದಿಂದ ಹೊರಗುಳಿದು ಆ ಸ್ಥಾನವನ್ನು, ಯುದ್ಧ ವಿಮಾನ ತಯಾರಿಯ ಕುರಿತಂತೆ ಸಂಪೂರ್ಣ ಅನಕ್ಷರಸ್ಥನಾಗಿರುವ, ಅನನುಭವಿ ರಿಲಯನ್ಸ್ ತುಂಬಿತು.

ರಫೇಲ್ ಹಗರಣದ ತನಿಖೆಯ ಕುರಿತಂತೆ ಸಿಬಿಐ ಆಸಕ್ತಿ ತೋರುತ್ತಿರುವುದು ಗಮನಿಸಿ, ಆ ಸಂಸ್ಥೆಯನ್ನೇ ಇಲ್ಲವಾಗಿಸಿದ ಹೆಗ್ಗಳಿಕೆ ಮೋದಿಯದ್ದು. ಸಿಬಿಐ ಮುಖ್ಯಸ್ಥರಾದ ಅಲೋಕ್ ವರ್ಮಾ ಮತ್ತು ಅಸ್ತಾನಾ ನಡುವಿನ ಜಗಳ ಅವರಿಗೆಒಂದು ನೆಪವಾಗಿತ್ತು. ಅಸ್ತಾನಾ ಅವರು ಕೇಂದ್ರ ಸರಕಾರದ ಗೂಢಚರನಂತೆ ಸಿಬಿಐಯೊಳಗೆ ಕೆಲಸ ಮಾಡುತ್ತಿದ್ದರು. ರಫೇಲ್ ಹಗರಣದ ತನಿಖೆಯ ಕುರಿತಂತೆ ಅಲೋಕ್ ವರ್ಮಾ ಆಸಕ್ತಿ ತೋರಿಸುತ್ತಿರುವುದು ಆಸ್ತಾನಾ ಮೂಲಕವೇ ಕೇಂದ್ರಕ್ಕೆ ತಿಳಿಯಿತು ಮತ್ತು ಸಿಬಿಐಯಲ್ಲಿ ಶಿಸ್ತು ಸ್ಥಾಪಿಸುವ ನೆಪದಲ್ಲಿ ವರ್ಮಾ ಅವರನ್ನು ರಜೆಯಲ್ಲಿ ಕಳುಹಿಸಿತು. ಇದೀಗ ಸುಪ್ರೀಂಕೋರ್ಟ್‌ನಲ್ಲೂ ತನಗೆ ಪೂರಕವಾದ ಹೇಳಿಕೆ ಹೊರಬೀಳುವಂತೆ ನೋಡಿಕೊಳ್ಳುವಲ್ಲಿ ಕೇಂದ್ರ ಯಶಸ್ವಿಯಾಗಿದೆ. ಆದರೆ ಸುಪ್ರೀಂಕೋರ್ಟ್‌ನ ಹೇಳಿಕೆಗಳಲ್ಲೂ ಬಹಳಷ್ಟು ವಿರೋಧಾಭಾಸಗಳಿವೆ.

‘‘(ರಫೇಲ್ ಒಪ್ಪಂದದ) ಬೆಲೆನಿಗದಿಯ ವಿವರಗಳನ್ನು ಸಿಎಜಿಯವರ ಜೊತೆ ಹಂಚಿಕೊಳ್ಳಲಾಗಿದೆ ಹಾಗೂ ಸಿಎಜಿ ವರದಿಯನ್ನು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ (ಪಿಎಸಿ) ಪರಿಶೀಲಿಸಿದೆ. ಕೇವಲ ವರದಿಯ ಸಂಕ್ಷಿಪ್ತ ಭಾಗವನ್ನು ಮಾತ್ರವೇ ಸಂಸತ್ ಹಾಗೂ ಸಾರ್ವಜನಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗಿದೆ’’ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಆದರೆ ಸಿಎಜಿ ವರದಿ ತನ್ನ ಕೈ ಸೇರಿಲ್ಲ ಎಂದು ಪಿಎಸಿ ಈಗಾಗಲೇ ಸ್ಪಷ್ಟಪಡಿಸಿದೆ. ಹಾಗಿರುವಾಗ ಸುಪ್ರೀಂಕೋರ್ಟ್‌ನ್ನು ತಪ್ಪುದಾರಿಗೆ ಕೊಂಡೊಯ್ಯಲಾಗಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಅದೇನೇ ಇರಲಿ, ಮೋದಿಯವರು ನಿಜಕ್ಕೂ ನಿರಪರಾಧಿಯಾಗಿದ್ದರೆ ಅವರು ತನಿಖೆಗೇಕೆ ಹೆದರಬೇಕು? ಸೂಕ್ತ ತನಿಖೆಯನ್ನು ನಡೆಸಿ ತನ್ನನ್ನು ತಾನು ನಿರಪರಾಧಿ ಎಂದು ಸಾಬೀತು ಪಡಿಸುವುದು, ಆ ಮೂಲಕ ದೇಶದ ವಿಶ್ವಾಸಾರ್ಹತೆಯನ್ನು ಮರುಗಳಿಸಿಕೊಳ್ಳುವುದು ಅವರ ಅಗತ್ಯವಾಗಿದೆ. ಸುಪ್ರೀಂಕೋರ್ಟ್ ಮಾಡುವುದಿಲ್ಲವಾದರೆ, ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಲಿ. ರಫೇಲ್ ಹಗರಣ ಈ ದೇಶದ ಭದ್ರತೆಯ ಕುರಿತ ಆತಂಕವಾದುದರಿಂದ, ತಾನು ರಿಲಯನ್ಸ್‌ಗೆ ನಿಷ್ಠನೋ, ದೇಶಕ್ಕೆ ನಿಷ್ಠನೋ ಎನ್ನುವುದನ್ನು ಮೋದಿ ಸಾಬೀತು ಪಡಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News