ಪಾಕ್ ಹೈಕಮಿಷನ್‌ನಲ್ಲಿ 23 ಭಾರತೀಯರ ಪಾಸ್‌ಪೋರ್ಟ್ ನಾಪತ್ತೆ

Update: 2018-12-15 03:56 GMT

ಹೊಸದಿಲ್ಲಿ, ಡಿ.15: ಪಾಕಿಸ್ತಾನದ ಹೈಕಮಿಷನ್ ಕಚೇರಿಯಲ್ಲಿ 23 ಭಾರತೀಯರ ಪಾಸ್‌ಪೋರ್ಟ್ ನಾಪತ್ತೆಯಾಗಿರುವುದು ಭದ್ರತಾ ಆತಂಕಕ್ಕೆ ಕಾರಣವಾಗಿದೆ. ಈ ಪಾಸ್‌ಪೋರ್ಟ್‌ಗಳು ಕರ್ತಾರ್‌ಪುರ ಸಾಹಿನ್ ಸೇರಿದಂತೆ ಪಾಕಿಸ್ತಾನದ ಗುರುದ್ವಾರಗಳಿಗೆ ಭೇಟಿ ನೀಡಲು ಬಯಸಿದ ಸಿಕ್ಖ್ ಯಾತ್ರಾರ್ಥಿಗಳದ್ದಾಗಿದೆ.

ಈ ಪೈಕಿ ಹಲವರು ಪೊಲೀಸರಿಗೆ ದೂರು ನೀಡಿದ್ದು, ಆ ಬಳಿಕ ಈ ವಿಷಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಗಮನಕ್ಕೆ ಬಂದಿದೆ. ತಕ್ಷಣ ಸಚಿವಾಲಯ ಈ ಎಲ್ಲ ಪಾಸ್‌ಪೋರ್ಟ್‌ಗಳ ರದ್ದತಿಗೆ ಕ್ರಮ ಕೈಗೊಂಡಿದ್ದು, ಈ ಸಮಸ್ಯೆಯನ್ನು ಪಾಕಿಸ್ತಾನದ ಗಮನಕ್ಕೆ ತಂದಿದೆ. ನವೆಂಬರ್ 21ರಿಂದ 30ರವರೆಗೆ ನಡೆದ ಗುರುನಾನಕ್ ಅವರ 549ನೇ ಜಯಂತಿಯಲ್ಲಿ ಭಾಗವಹಿಸಲು ಅನುವಾಗುವಂತೆ ಪಾಕಿಸ್ತಾನ ಸರ್ಕಾರ 3,800 ಭಾರತೀಯ ಸಿಕ್ಖ್ ಯಾತ್ರಾರ್ಥಿಗಳಿಗೆ ವೀಸಾ ನೀಡಿತ್ತು.

ಇದೀಗ ಪಾಸ್‌ಪೋರ್ಟ್ ಕಳೆದುಕೊಂಡ 23 ಸಿಕ್ಖ್ ಯಾತ್ರಿಗಳು ವೀಸಾಗೆ ಅರ್ಜಿ ಸಲ್ಲಿಸಿದ್ದರು ಹಾಗೂ ಇವರೆಲ್ಲರೂ ಈ ಗುಂಪಿನ ಜತೆ ಪ್ರವಾಸ ಕೈಗೊಳ್ಳಬೇಕಿತ್ತು. ಈ ಪಾಸ್‌ಪೋರ್ಟ್‌ಗಳ ನಾಪತ್ತೆಗೆ ತನ್ನ ಅಧಿಕಾರಿಗಳು ಹೊಣೆ ಎಂಬ ವಾದವನ್ನು ಪಾಕಿಸ್ತಾನ ತಳ್ಳಿಹಾಕಿದೆ.

ಈ ಎಲ್ಲ 23 ಪಾಸ್‌ಪೋರ್ಟ್‌ಗಳನ್ನು ದಿಲ್ಲಿ ಮೂಲದ ಏಜೆಂಟ್ ಒಬ್ಬ ಸಂಗ್ರಹಿಸಿದ್ದು, ಇದನ್ನು ಇತರ ದಾಖಲೆಗಳ ಜತೆ ಪಾಕಿಸ್ತಾನ ಹೈಕಮಿಷನ್‌ಗೆ ಸಲ್ಲಿಸಿದ್ದಾಗಿ ಆತ ಹೇಳಿಕೊಂಡಿದ್ದಾನೆ. ಆದರೆ ಇವುಗಳನ್ನು ಮರು ಪಡೆಯಲು ಪಾಕ್ ಹೈಕಮಿಷನ್‌ಗೆ ತೆರಳಿದಾಗ, ಈ ದಾಖಲೆಗಳು ತಮ್ಮ ಬಳಿ ಇಲ್ಲ ಎಂದು ಪಾಕಿಸ್ತಾನಿ ಅಧಿಕಾರಿಗಳು ಹೇಳಿದ್ದಾರೆ ಎಂದು ಭಾರತೀಯ ಅಧಿಕಾರಿಗಳಿಗೆ ಏಜೆಂಟ್ ದೂರು ನೀಡಿದ್ದ.

"ಇದು ಗಂಭೀರ ವಿಚಾರವಾಗಿದ್ದು, ಈ ಪಾಸ್‌ಪೋರ್ಟ್‌ಗಳ ದುರ್ಬಳಕೆಯಾಗದಂತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News