ರಫೇಲ್ ಒಪ್ಪಂದ: ಜನವರಿ ಅಂತ್ಯದೊಳಗೆ ಸಿಎಜಿ ವರದಿ

Update: 2018-12-15 04:06 GMT

ಹೊಸದಿಲ್ಲಿ, ಡಿ.15: ಫ್ರಾನ್ಸ್ ಜತೆ ಭಾರತ 2016ರಲ್ಲಿ ಮಾಡಿಕೊಂಡ ಒಪ್ಪಂದದಂತೆ 59 ಸಾವಿರ ಕೋಟಿ ರೂ. ವೆಚ್ಚದಲ್ಲಿ 36 ಯುದ್ಧ ವಿಮಾನಗಳನ್ನು ಖರೀದಿ ಮಾಡುವ ಕುರಿತಂತೆ ಸರ್ಕಾರದ ಅಧಿಕೃತ ಪರಿಶೋಧಕರಾಗಿರುವ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ತಮ್ಮ ವರದಿಯನ್ನು ಇನ್ನಷ್ಟೇ ಅಂತಿಮಪಡಿಸಬೇಕಿದ್ದು, ಜನವರಿ ಅಂತ್ಯದ ವೇಳೆಗೆ ವರದಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಇತರ ಹಲವು ರಕ್ಷಣಾ ಸಾಧನಗಳ ಖರೀದಿ ವಿಷಯವನ್ನು ಕೂಡಾ ಈ ವರದಿ ಒಳಗೊಂಡಿರುತ್ತದೆ ಎಂದು ಮೂಲಗಳು ಹೇಳಿವೆ. ರಕ್ಷಣಾ ಸಾಧನಗಳ ಖರೀದಿ ಕುರಿತ ಸಮಗ್ರ ವರದಿಯಲ್ಲಿ ಒಂದು ಅಧ್ಯಾಯದಲ್ಲಿ ರಫೇಲ್ ಒಪ್ಪಂದದ ಬಗ್ಗೆ ಉಲ್ಲೇಖವಿದೆ ಎಂದು ಮೂಲಗಳು ತಿಳಿಸಿವೆ.

ಸಿಎಜಿ ವರದಿ ಅಂತಿಮಪಡಿಸುವ ಮುನ್ನ ರಕ್ಷಣಾ ಸಚಿವಾಲಯದ ಜತೆಗೆ ನಿರ್ಗಮನ ಸಮ್ಮೇಳನ (ಎಕ್ಸಿಟ್ ಕಾನ್ಫರೆನ್ಸ್) ನಡೆಸುವುದು ಕಡ್ಡಾಯವಾಗಿದ್ದು, ಈ ಸಭೆ ಇನ್ನೂ ನಡೆದಿಲ್ಲ.

ಸಿಎಜಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ಬಳಿಕ ಅದನ್ನು ಸಂಸತ್ತಿನಲ್ಲಿ ಮಂಡಿಸುವ ದಿನಾಂಕ ಹಾಗೂ ಸಮಯವನ್ನು ಸರ್ಕಾರ ನಿರ್ಧರಿಸುತ್ತದೆ. ಕೆಲವೊಮ್ಮೆ ಇದು ಹಲವು ತಿಂಗಳುಗಳಷ್ಟು ವಿಳಂಬವಾಗುತ್ತದೆ. ವರದಿ ಸಂಸತ್ತಿನಲ್ಲಿ ಮಂಡನೆಯಾದ ಬಳಿಕ ಇದನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕರ ನೇತೃತ್ವದ ಸಾರ್ವಜನಿಕ ಲೆಕ್ಕ ಸಮಿತಿಗೆ ಮೌಲ್ಯಮಾಪನಕ್ಕಾಗಿ ಒಪ್ಪಿಸಲಾಗುತ್ತದೆ. ಸದ್ಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ಸಿಎಜಿ ಕಳೆದ ಒಂದು ವರ್ಷದಿಂದ ರಫೇಲ್ ಒಪ್ಪಂದದ ಅಂಶಗಳನ್ನು ಪರಿಶೀಲಿಸುತ್ತಿದ್ದು, ಬೆಲೆನಿಗದಿ, ಪ್ರತಿಸ್ಪರ್ಧಿ ಕಂಪೆನಿಗಳ ಬಿಡ್, ಜಾಗತಿಕವಾಗಿ ಲಭ್ಯವಿರುವ ಇತರ ಯುದ್ಧ ವಿಮಾನಗಳ ತುಲನಾತ್ಮಕ ಬೆಲೆ ಮತ್ತಿತರ ಅಂಶಗಳ ಬಗ್ಗೆ ಪರಿಶೀಲಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News