ಮೆಟ್ರೋ ಸಂಪೂರ್ಣ ಲೈನ್‌ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚನೆ: ಡಿಸಿಎಂ ಡಾ.ಜಿ.ಪರಮೇಶ್ವರ್

Update: 2018-12-15 07:47 GMT

ಬೆಂಗಳೂರು, ಡಿ.15: ಟ್ರಿನಿಟ್‌ ಮೆಟ್ರೋ ನಿಲ್ದಾಣದ ಬಳಿ ಪಿಲ್ಲರ್‌ ಬಿರುಕು ಬಿಟ್ಟಿರುವುದನ್ನು ಪರಿಶೀಲಿಸಲು ವಿಧಾನಸೌಧ ಮೆಟ್ರೋ ನಿಲ್ದಾಣದಿಂದ ಹಲಸೂರು ಮೆಟ್ರೋ ನಿಲ್ದಾಣದವರೆಗೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಮೆಟ್ರೋ ರೈಲಿನ ಮೂಲಕ ಸಂಚರಿಸಿ, ವೀಕ್ಷಿಸಿದರು.

ಬಳಿಕ ಟ್ರಿನಿಟಿ‌ ಸರ್ಕ‌ಲ್‌ಗೆ ಆಗಮಿಸಿದ ಅವರು, ಬಿರುಕು ಬಿಟ್ಟಿರುವ ಪಿಲ್ಲರ್‌ ನ್ನು ಪರಿಶೀಲಿಸಿದರು. ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪಿಲ್ಲರ್‌ ಬಿರುಕು ಬಿಟ್ಟಿರುವುದನ್ನು ಈಗಾಗಲೇ ದಿಲ್ಲಿಯಿಂದ ತಜ್ಞರು ಹಾಗೂ ನಮ್ಮ‌ ತಾಂತ್ರಿಕ ತಂಡ ಪರಿಶೀಲಿಸಿ, ದುರಸ್ತಿ ಕಾರ್ಯ ಪ್ರಾರಂಭಿಸಿದೆ.

ಪಿಲ್ಲರ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲ. ಪಿಲ್ಲರ್‌ ಮೇಲೆ ಕೂರಿಸುವಾಗ ಸ್ಪೇರಿಂಗ್ ಹಾಕಿ ಕೂರಿಸಲಾಗುತ್ತದೆ. ಆ ಸ್ಪೇರಿಂಗ್‌ ಸ್ವಲ್ಪ ಪ್ರಮಾಣದಲ್ಲಿ ಜರುಗಿದೆ. ಯಾವುದೇ ತೊಂದರೆ ಇಲ್ಲ. ಇದರಿಂದ ಜನಸಾಮಾನ್ಯರು ಆತಂಕಕ್ಕೆ ಒಳಗಾಗಬೇಕಿಲ್ಲ. ಈ ದೃಷ್ಟಿಯಿಂದಲೇ ನಾನು ಜನರೊಂದಿಗೆ ಮೆಟ್ರೋ ರೈಲಿನಲ್ಲಿ ಸಂಚರಿಸಿದೆ ಎಂದರು.

ಈ ಬಿರುಕಿನಿಂದಾಗಿ ಜನರಲ್ಲಿ ಆತಂಕ ಮನೆ ಮಾಡಿದೆ. ಹೀಗಾಗಿ ಇಡೀ ಮೆಟ್ರೋ ಲೈನ್‌ನನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News