ಜೈನ ಸ್ಥಿತಿವಂತ ಕುಟುಂಬಗಳು ಕೆರೆ ಅಭಿವೃದ್ಧಿಗೊಳಿಸಲಿ: ಡಾ.ವೀರೇಂದ್ರ ಹೆಗ್ಗಡೆ

Update: 2018-12-15 13:03 GMT

ಬೆಂಗಳೂರು, ಡಿ.15: ಜೈನ ಸಮುದಾಯದಲ್ಲಿರುವ ಶ್ರೀಮಂತ ಕುಟುಂಬಗಳು ಒಂದೊಂದು ಕೆರೆಯನ್ನು ಅಭಿವೃದ್ಧಿಗೊಳಿಸಿ ಸಮಾಜಕ್ಕೆ ಅರ್ಪಿಸುವ ಹೊಣೆ ವಹಿಸಿಕೊಳ್ಳಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸಲಹೆ ನೀಡಿದ್ದಾರೆ.

ಶನಿವಾರ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಜೈನ ಸಂಘಟನೆಯ ರಾಷ್ಟ್ರೀಯ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದಿನ ಕಾಲಘಟ್ಟದಲ್ಲಿ ನೀರಿನ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಜೈನ ಸಮುದಾಯದ ಸ್ಥಿತಿವಂತ ಕುಟುಂಬಗಳು ಒಂದೊಂದು ಕೆರೆಯನ್ನು ಸಂರಕ್ಷಣೆ ಮಾಡಲು ಮುಂದಾಗಲಿ ಎಂದು ತಿಳಿಸಿದರು.

ಮನುಷ್ಯರಲ್ಲಿ ಆತ್ಮಧರ್ಮ ಎಂಬುದು ಹುಟ್ಟಿನಿಂದಲೇ ಬರುತ್ತದೆ. ಅದನ್ನು ಮತ್ತಷ್ಟು ಬೆಳೆಸಿಕೊಂಡು ಮನುಷ್ಯತ್ವವುಳ್ಳ ಮನುಷ್ಯರಾಗಿ ರೂಪಗೊಳ್ಳಬೇಕು. ನಾವು ತಿನ್ನುವ ಅನ್ನವನ್ನು ಯಾವ ಜಾತಿಯ, ಧರ್ಮದವರು ಬೆಳೆದಿದ್ದಾರೆಂದು ನೋಡುವುದಿಲ್ಲ. ಹೀಗಾಗಿ, ನಾವು ಜಾತಿ, ಧರ್ಮವನ್ನು ನೋಡದೆ ಗಳಿಸಿದ್ದನ್ನು ಸಮಾಜಕ್ಕೆ ಹಿಂತಿರಿಗಿಸುವ ಭಾವನೆಯನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಅಗತ್ಯವಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಕ್ಕಿದರೆ ಕುಟುಂಬದ ಅಭಿವೃದ್ಧಿಯಾಗುತ್ತದೆ ಎಂದು ನುಡಿದರು. ಇದೇ ವೇಳೆ ಜೈನ ಸಮುದಾಯದಲ್ಲಿ ನೈರ್ಮಲ್ಯ, ಸ್ಪಷ್ಟತೆ ಹಾಗೂ ಪಾಲ್ಗೊಳ್ಳುವಿಕೆಗೆ ಹೆಚ್ಚು ಆದ್ಯತೆ ನೀಡುವುದರಿಂದಲೇ ಅದು ಹೆಚ್ಚು ಪ್ರಬಲವಾಗಿ ಅಭಿವೃದ್ಧಿಯಾಗಲು ಸಾಧ್ಯವಾಗುತ್ತಿದೆ ಎಂದರು.

ಸಂಸದ ಬಿ.ವಿ.ನಾಯಕ್ ಮಾತನಾಡಿ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯ ಜಲ ಸಂರಕ್ಷಣೆಗಾಗಿ, ಕೆರೆಗಳ ಪುನಶ್ಚೇತನಕ್ಕಾಗಿ ಬಿಜೆಎಸ್ ಸಂಘಟನೆ ಒಡಂಬಡಿಕೆ ಮಾಡಿಕೊಂಡು ಕೆಲಸ ಮಾಡುತ್ತಿದೆ. ಉತ್ತರ ಕರ್ನಾಟಕ ಪ್ರದೇಶದಲ್ಲಿನ ಜಿಲ್ಲೆಗಳಲ್ಲಿ ಅಂತರ್ಜಲ ಕುಸಿದಿದ್ದು, ಹವಾಮಾನ ವೈಪರೀತ್ಯದಿಂದಾಗಿ ಬರಗಾಲ ಬಂದಿದೆ. ಈ ಸಂದರ್ಭದಲ್ಲಿ ಕೆರೆಗಳ ಪುನಶ್ಚೇತನಕ್ಕೆ ಮುಂದಾಗಿರುವುದು ಅಭಿನಂದನಾರ್ಹ ಎಂದು ಹೇಳಿದರು.

ಮೀನುಗಾರಿಕಾ ಇಲಾಖೆ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ, ಜೈನ ಸಂಘಟನೆಯು ರಾಜ್ಯದ ವಿವಿಧ ತಾಲೂಕುಗಳಲ್ಲಿ ನೀರಿನ ಸಂರಕ್ಷಣೆ ಹಾಗೂ ಕೆರೆಗಳ ಅಭಿವೃದ್ಧಿಗಾಗಿ ಒಪ್ಪಂದ ಮಾಡಿಕೊಂಡಿರುವುದು ಶ್ಲಾಘನೀಯ. ಹಿಂದೆ ಮಹಾರಾಷ್ಟ್ರದಲ್ಲಿ ಅಪಾರವಾದ ಕೆಲಸ ಮಾಡಿರುವ ಸಂಘಟನೆ ರಾಜ್ಯದಲ್ಲಿಯೂ ತನ್ನ ಛಾಪು ಮೂಡಿಸಲು ಮುಂದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ಶಿವನಗೌಡ ನಾಯಕ್, ನೀತಿ ಆಯೋಗದ ಉಪಾಧ್ಯಕ್ಷ ರಾಕೇಶ್ ಕುಮಾರ್, ಜೈನ ಸಂಘಟನೆಯ ರಾಜ್ಯಾಧ್ಯಕ್ಷ ದಿನೇಶ್ ಪಾಲಚೇರ, ಸಂಘಟನೆಯ ಮುಖಂಡ ಶಾಂತಿಲಾಲ್ ಮುಢ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಅಗತ್ಯ ನೆರವಿಗೆ ಸರಕಾರ ಸಿದ್ಧ

ರಾಜ್ಯಾದ್ಯಂತ ಬರಗಾಲ ಎದುರಾಗಿದ್ದು, ಕೆರೆಗಳಲ್ಲಿ ನೀರು ಬರಿದಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜೈನ್ ಸಂಘಟನೆ ನೀರು ಸಂರಕ್ಷಣೆಗಾಗಿ ಹಾಗೂ ಕೆರೆಗಳ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿಕೊಂಡಿದೆ. ಅದಕ್ಕೆ ಸರಕಾರದಿಂದ ಅಗತ್ಯವಾದ ನೆರವು ನೀಡಲು ಚಿಂತಿಸುತ್ತೇವೆ.

-ವೆಂಕಟರಾವ್ ನಾಡಗೌಡ, ಮೀನುಗಾರಿಕಾ ಇಲಾಖೆ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News