‘ಎಮ್ಮೆಗೆ ಶೇವಿಂಗ್ ಮಾಡುವವರಿಗೆ ಜಾತಿಯಿದೆ, ಅವಕಾಶ ವಂಚಿತರಿಗೆ ಒಂದು ಜಾತಿಯಿಲ್ಲ’

Update: 2018-12-15 16:31 GMT

ಬೆಂಗಳೂರು, ಡಿ.15: ಸ್ವತಂತ್ರ ಭಾರತದೊಳಗೆ ಕಿವಿ ಸ್ವಚ್ಛ ಮಾಡುವವರಿಗೆ, ಎಮ್ಮೆಗೆ ಶೇವಿಂಗ್ ಮಾಡುವವರಿಗೆ ಒಂದೊಂದು ಪ್ರತ್ಯೇಕ ಜಾತಿಯಿದೆ. ಆದರೆ, ಅವಕಾಶ ವಂಚಿತ ಹಲವಾರು ಬುಡಕಟ್ಟು, ಆದಿವಾಸಿಗಳು ಸೇರಿದಂತೆ ಹಲವು ಸಮುದಾಯಗಳಿಗೆ ಅಧಿಕೃತವಾಗಿ ಗುರುತಿಸಿಕೊಳ್ಳಲು ಒಂದು ಜಾತಿಯಿಲ್ಲ. ಇವರಿಗೆ ಯಾವುದೇ ತಹಶೀಲ್ದಾರರು, ಸರಕಾರದಿಂದ ಜಾತಿ ದೃಢೀಕರಣವೂ ಸಿಗುತ್ತಿಲ್ಲ. ಅಂದರೆ ನಾವಿಂದು ಯಾವ ದೇಶದಲ್ಲಿದ್ದೇವೆ...?

ಹೀಗೆ ಪ್ರಶ್ನಿಸಿದವರು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್. ಶನಿವಾರ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಹಲವು ಹಿರಿಯರು ಕೆಲಸ ಮಾಡಿದ ಸಂಸ್ಥೆಯಲ್ಲಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದರು. ನಾನು ಲಂಕೇಶ್ ಪತ್ರಿಕೆ ಹಾಗೂ ವಕೀಲ ವೃತ್ತಿಯ ಮೂಲಕ ಪಡೆದ ಅನುಭವದ ಆಧಾರದ ಮೇಲೆ ಸೂಕ್ಷ್ಮವಾದ ವಿಷಯಗಳನ್ನು ಗುರುತಿಸಲು ಸಾಧ್ಯವಾಗಿತ್ತು. ಹೆಸರಿಲ್ಲದ, ಜಾತಿಯೇ ಗೊತ್ತಿಲ್ಲದ 50 ಕ್ಕೂ ಅಧಿಕ ಜಾತಿಗಳನ್ನು ಕಂಡು ಹಿಡಿದು, ಅವರಿಗೆ ಜಾತಿಯ ಅಸ್ಮಿತೆಯನ್ನು ನೀಡಬೇಕು ಎಂದು ಸರಕಾರಕ್ಕೆ ಶಿಫಾರಸ್ಸು ಸಲ್ಲಿಸಿದ್ದೆವು ಎಂದು ನೆನಪಿಸಿಕೊಂಡರು.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಾದ ಬಳಿಕ ನಾನು ನನ್ನ ಕಾರ್ಯವನ್ನು ಪ್ರಾಮಾಣಿಕವಾಗಿ ವಸ್ತುನಿಷ್ಠವಾಗಿ ನಿರ್ವಹಿಸಿದ್ದೇನೆ. ಅಂದು ಸರಕಾರ ಬದಲಾದ 6 ತಿಂಗಳಲ್ಲಿ ಹಲವಾರು ತೊಂದರೆ ನೀಡಿದರು. ಆದರೂ ನನ್ನ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ. ಲೈಂಗಿಕ ಅಲ್ಪಸಂಖ್ಯಾತರನ್ನು ಗುರುತಿಸಿದೆವು. ಅಲ್ಲದೆ, ದೇವದಾಸಿ, ವೇಶ್ಯೆ, ಎಚ್‌ಐವಿ ಪೀಡಿತರ ಮಕ್ಕಳಿಗೆ ಮೀಸಲಾತಿ ಸೌಲಭ್ಯ ನೀಡಬೇಕೆಂದು ಮೊಟ್ಟ ಮೊದಲಿಗೆ ಸರಕಾರಕ್ಕೆ ಶಿಫಾರಸ್ಸು ಮಾಡಿದೆವು. ದೇಶದಲ್ಲಿ ಟ್ರಾನ್ಸ್‌ಜೆಂಡರ್ ಅನ್ನು ಹಿಂದುಳಿದ ವರ್ಗಗಳ ಆಯೋಗದ ವ್ಯಾಪ್ತಿಗೆ ತಂದದ್ದು ನಮ್ಮ ಹೆಗ್ಗಳಿಕೆ ಎಂದು ತಮ್ಮ ಸಾಧನೆ ತಿಳಿಸಿದರು.

ಬಾಲ್ಯದಲ್ಲಿ ಪತ್ತೇದಾರಿ ಕಾದಂಬರಿಗಳು, ನರಸಿಂಹಯ್ಯ ಅವರ ಕಾದಂಬರಿಗಳನ್ನು ಓದುತ್ತಿದ್ದೆ. ಹೀಗಾಗಿ, ನಾನು ದೇಶಸೇವೆ ಮಾಡಬೇಕು ಎಂಬ ಹಂಬಲ ಉಂಟಾಗಿತ್ತು. ಈ ಸಂದರ್ಭದಲ್ಲಿ ಆರೆಸ್ಸೆಸ್ ಸೇರಬೇಕು ಎಂದು ನಿರ್ಧರಿಸಿಬಿಟ್ಟಿದ್ದೆ. ಆದರೆ, ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ನನ್ನ ದಿಕ್ಕನ್ನು ಬದಲಿಸಿದರು. ಅನಂತರ ದಿನಗಳಲ್ಲಿ ನಕ್ಸಲಿಸಂ ಸಾಹಿತ್ಯವನ್ನು ಓದುತ್ತಾ ಅವರೊಂದಿಗೆ ಸೇರಿಕೊಳ್ಳುತ್ತಿದ್ದೆ. ಈ ವೇಳೆ ನನ್ನಣ್ಣ ಬೆಂಗಳೂರಿಗೆ ಕರೆತಂದು ಕಾನೂನಿಗೆ ಸೇರಿದರು ಎಂದು ಹೇಳಿದರು.

ಕಾಲೇಜು ದಿನಗಳಲ್ಲಿ ಬಂಡಾಯ ಸಾಹಿತ್ಯ ಓದುತ್ತಿದ್ದೆ. ನಂತರದ ದಿನಗಳಲ್ಲಿ ಲಂಕೇಶ್ ಪತ್ರಿಕೆಯಲ್ಲಿ ಬರೆಯಲು ಆರಂಭಿಸಿದೆ. ಈ ಸಂದರ್ಭದಲ್ಲಿ ಲಂಕೇಶ್ ನನ್ನ ಮೇಲೆ ಅಪಾರವಾದ ಪರಿಣಾಮ ಬೀರಿದರು. ಇನ್ನುಳಿದಂತೆ ಕುವೆಂಪುರ ಪ್ರಭಾವದಿಂದಲೇ ನಾನು ಸಾಹಿತ್ಯವನ್ನು ಹೆಚ್ಚು ಓದಿಕೊಳ್ಳಲು ಸಾಧ್ಯವಾಯಿತು ಎಂದು ಅವರು ಇದೇ ವೇಳೆ ನುಡಿದರು.

ನಾನು ರೈತ ಕುಟುಂಬದಿಂದ ಬಂದವನು. ಮಂಡ್ಯ, ಮೈಸೂರು, ಹಾಸನ ಸೇರಿದಂತೆ ನೀರಾವರಿ ಜಮೀನು ಇರುವ ಕಡೆಯೇ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ಜರುಗಿವೆ. ಕೋಲಾರದಲ್ಲಿ ಅತ್ಯಂತ ಕಡಿಮೆ ಆತ್ಮಹತ್ಯೆಯಾಗಿವೆ. ಸಾವಿನಿಂದ ಏನನ್ನೂ ಸಾಧಿಸಲಾಗುವುದಿಲ್ಲ. ನಮ್ಮಲ್ಲಿ ಅಂಬೇಡ್ಕರ್ ರೂಪಿಸಿದಂತಹ ಉತ್ತಮ ಕೃಷಿ ನೀತಿಗಳನ್ನು ಅನುಷ್ಠಾನಗೊಳಿಸುವ ವಿಧಾನಗಳು ವೈಜ್ಞಾನಿಕವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಳೆದ ಎರಡು ಸರಕಾರದ ಅವಧಿಯಲ್ಲಿ ಒಂದು ಎಕರೆ ಭೂಮಿಯೂ ಭೂರಹಿತರು, ಬಡವರಿಗೆ ಹಂಚಿಕೆಯಾಗಿಲ್ಲ. ಭೂಮಿ ಕೊಡುವ ಇಚ್ಛಾಶಕ್ತಿ ಸರಕಾರಕ್ಕೆ ಇರಬೇಕು. ರೈತರ ಸಾಲ ಮನ್ನಾ ಯೋಜನೆಗೆ ನನ್ನ ಬೆಂಬಲವಿಲ್ಲ. ಯಾರ ಸಾಲವನ್ನು ಮನ್ನಾ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಯೋಚಿಸಬೇಕು. ರೈತರು ಸ್ವಾವಲಂಬಿಗಳಾಗಬೇಕು. ರೈತರು ಬೆಳೆದ ಬೆಳೆಗೆ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಜಾರಿಗೊಳ್ಳಬೇಕು. ಆಧುನಿಕ ತಂತಜ್ಞಾನದ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕಿದೆ ಎಂದು ಸಭಿಕರ ಪ್ರಶ್ನೆಗೆ ಉತ್ತರಿಸಿದರು.

ಸಂವಿಧಾನದ ಮೇಲಿನ ದಾಳಿ ಇತ್ತೀಚಿಗೆ ನನ್ನನ್ನು ತುಂಬಾ ಕಾಡಿದ ಸಂದರ್ಭವಾಗಿದೆ. ಇದು ಒಂದು ದೇಶ ಆತಂಕವನ್ನು ಎದುರು ನೋಡುತ್ತಿರುವ ಸಂಕೇತ. ಇಂದು ಸಂವಿಧಾನದ ಮೂಲ ಆಶಯಗಳ ಮೇಲೆ ಬಹಳ ನಿರಂತರವಾದ ಒಡೆತ ಬೀಳುತ್ತಿದೆ. ಸಂವಿಧಾನ ಭಾರತೀಯರ ಆತ್ಮವಿದ್ದಂತೆ. ಹಾಗಾಗಿ ಇಂದು ಸಂವಿಧಾನವನ್ನು ಕಾಪಾಡಿಕೊಳ್ಳುವ ಅಗತ್ಯವಿದೆ. ಮನೆಗಳಲ್ಲಿ ಯಾವುದಾದರೂ ಧರ್ಮ ಪಾಲಿಸಿ. ಆದರೆ, ಭಾರತೀಯರಾಗಿದ್ದಲ್ಲಿ ಸಂವಿಧಾನ ಧರ್ಮ ಪಾಲಿಸಬೇಕು ಎಂದು ಮನವಿ ಮಾಡಿದರು.

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಮತ್ತು ಚಿಂತಕ ಎಂ.ಎಂ.ಕಲಬುರ್ಗಿ ಕೊಲೆಯಾದ ಬಳಿಕ ಕೋಮುವಾದಿಗಳ ಹಿಟ್ ಲಿಸ್ಟ್‌ನಲ್ಲಿ ನನ್ನದೂ ಹೆಸರಿತ್ತು. ಆದರೆ, ಈ ಬಗ್ಗೆ ನನಗೆ ಯಾವುದೇ ಭಯವಿಲ್ಲ. ನಾನು ಲಂಕೇಶ್‌ರ ಪರಂಪರೆಯಲ್ಲಿ ಬೆಳೆದವನು. ಅಲ್ಲದೆ, ನಾನೆಂದು ಸುಳ್ಳನ್ನು ಹೇಳುವುದಿಲ್ಲ. ನನ್ನ ಉಸಿರಿರುವರೆಗೂ ನ್ಯಾಯದ ಪರವಾಗಿ ನಿಲ್ಲುತ್ತೇನೆ.

- ಡಾ.ಸಿ.ಎಸ್.ದ್ವಾರಕಾನಾಥ್, ಹಿರಿಯ ವಕೀಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News